ಕುಶಾಲನಗರ ಆ.13 NEWS DESK : ಸದೃಢ ರಾಷ್ಟ್ರವನ್ನಾಗಿ ನಿರ್ಮಿಸುವಲ್ಲಿ ಯುವ ಶಕ್ತಿಯ ಪಾತ್ರ ಪ್ರಮುಖವಾಗಿದೆ. ಇಂತಹ ಯುವ ಶಕ್ತಿಯನ್ನು ಮಾದಕ ವ್ಯಸನದಿಂದ ಮುಕ್ತರಾಗಿರುವಂತೆ, ಅವರನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯ ನಾಗರಿಕನ ಮೇಲಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸೀನಪ್ಪ ಅಭಿಪ್ರಾಯಿಸಿದರು. ಚಿಕ್ಕ ಅಳುವಾರದ ಜ್ಞಾನಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, 78ನೇ ಸ್ವಾತಂತ್ರ‍್ಯ ದಿನಾಚರಣೆ – 2024ರ ಅಂಗವಾಗಿ ನಶಾ ಮುಕ್ತ ಭಾರತ ಅಭಿಯಾನ -2024 ರ ಪ್ರಯುಕ್ತ ಕೊಡಗು ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿದ್ದ “ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳು” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶದ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಹೊರ ರಾಷ್ಟ್ರಗಳಿಂದ ಬರುವಂತಹ ಮಾದಕ ವಸ್ತುಗಳನ್ನು ತಡೆಗಟ್ಟುವ ಹೊಣೆಗಾರಿಕೆ ನಮ್ಮದಾಗಿದೆ. ದೇಶದ ಅತ್ಯಮೂಲ್ಯ ಸಂಪತ್ತು ನಮ್ಮ ಯುವ ಶಕ್ತಿಯು ಹಾದಿ ತಪ್ಪದಂತೆ ಕಾಪಾಡಿಕೊಳ್ಳುಬೇಕು. ಕುಟುಂಬ ಮತ್ತು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವ ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಕಟಿಬದ್ಧರಾಗಬೇಕಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯವು ನಶಾ ಮುಕ್ತ ಭಾರತ ಅಭಿಯಾನದಲ್ಲಿ ಭಾಗವಹಿಸಿ ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸಲು ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ನುಡಿಯುತ್ತಾ, ನಶಾ ಮುಕ್ತ ಭಾರತ ಅಭಿಯಾನ -2024ರ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಆರಕ್ಷಕ ವೃತ್ತ ನಿರೀಕ್ಷಕ ರಾಜೇಶ್ ಕೊಟ್ಯಾನ್ ಮಾತನಾಡಿ, ಮಾದಕ ವ್ಯಸನ ಒಂದು ಸಾಮಾಜಿಕ ಪಿಡುಗು. ಇದನ್ನು ತಡೆಗಟ್ಟಲು ಸಾಂಘಿಕ ಹೋರಾಟ ನಡೆಸಬೇಕಾಗಿದೆ. ದೇಶವನ್ನು ಮಾದಕ ವಸ್ತು ವ್ಯಸನದಿಂದ ಮುಕ್ತಗೊಳಿಸಲು ಸಾಧ್ಯವಾದಷ್ಟು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಬೇಕಾಗಿದೆ. ಸದೃಢ ಮತ್ತು ಸ್ವಸ್ಥ ಸಮಾಜದ ನಿರ್ಮಾಣವಾಗಬೇಕಾದರೆ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವಂತಹ ಹಲವಾರು ರೀತಿಯ ಸವಾಲುಗಳನ್ನು ಸ್ವೀಕರಿಸಿ ಹೋರಾಟ ಮಾಡುವುದು ಬಹು ಮುಖ್ಯ. ಪೋಲೀಸ್ ಇಲಾಖೆಯವರ ಜೊತೆಗೆ ಸಾರ್ವಜನಿಕರ ಸಹಕಾರ ಕೂಡ ಅತ್ಯಗತ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಎನ್.ಕೆ.ಸುದರ್ಶನ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಜ಼ಮೀರ್ ಅಹಮದ್ ಸ್ವಾಗತಿಸಿ, ಪಿ.ಸಿ.ಮಂಜುನಾಥ್ ಗೌಡ ವಂದಿಸಿದರು.