ವಿರಾಜಪೇಟೆ ಆ.26 NEWS DESK : ರಾಜ್ಯಾದ್ಯಂತ ಪ್ರಖ್ಯಾತವಾಗಿರುವ ವಿರಾಜಪೇಟೆಯ ಐತಿಹಾಸಿಕ ಗೌರಿ- ಗಣೇಶ ಉತ್ಸವ ಕಾನೂನು ಕಟ್ಟಳೆಗಳನ್ನು ಪಾಲನೆ ಮಾಡುವುದರೊಂದಿಗೆ ವಿಜೃಂಭಣೆಯಿಂದ, ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡದೆ ಸಾಮರಸ್ಯದ ಹಬ್ಬವಾಗಿ ಆಚರಣೆಯಾಗಲಿ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ನಗರದ ಪುರಸಭಾಂಗಣದಲ್ಲಿ ಆಯೋಜಿತ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದ ಶೋಭಾಯಾತ್ರೆಯಲ್ಲಿ ಮಂಟಪಗಳು ಚಲಿಸುವ ಮುಕ್ಯ ರಸ್ತೆ ಒಳಗೊಂಡಂತೆ ಗುಂಡಿ ಬಿದ್ದ ನಗರದ ರಸ್ತೆಗಳನ್ನು ದುರಸ್ತಿ ಪಡಿಸಿವುದು ಸೇರಿದಂತೆ ಪಾದಚಾರಿ ಹಾದಿಯ ಕಾಮಗಾರಿಗಳಿಗೆ ಮಲೆಹಾನಿ ಪರಿಹಾರ ಹಣವನ್ನು ಬಳಕೆ ಮಾಡುವಂತೆ ತಹಶೀಲ್ದಾರ್ ಗೆ ಸ್ಪಷ್ಟ ಸೂಚನೆಯನ್ನು ನೀಡಿದರು. ಉತ್ಸವದ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ ಸುವ್ಯವಸ್ಥೆಯೊಂದಿಗೆ ಹಬ್ಬ ಆಚರಿಸಲು ಸಹಕರಿಸಯವಂತೆ ಮನವಿ ಮಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆಗೆ ಕಾರಣರಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಪುರಸಭಾ ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾತನಾಡಿ, ಉತ್ಸವದ ಸಂದರ್ಭ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲಿಸುವ ಮೂಲಕ ಪರಿಸರ ಕಾಪಾಡಿ. ಡಿಜೆ ಶಬ್ದ ಮಾಲಿನ್ಯ ಕಡಿವಾಣ ಹಾಕುವಂತೆ ಮನವಿ ಮಾಡಿ, ಇತಿಹಾಸ ಪ್ರಸಿದ್ಧ ಗಡಿಯಾರ ಕಂಬದ ಬಳಿ ಸಿಡಿಮದ್ದು ಸಿಡಿಸಿದರೆ ಗಡಿಯಾರ ಕಂಬಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿ, ಪ್ಲಾಸ್ಟ್ ಆಫ್ ಪ್ಯಾರೀಸ್‍ನಿಂದ ನಿರ್ಮಿಸಿದ ಗಣಪನ ವಿಗ್ರಹಗಳನ್ನು ಉತ್ಸವದಲ್ಲಿ ಬಳಸದಿರಿ. ಇದಕ್ಕೆ ಬದಲಾಗಿ ಪರಿಸರಕ್ಕೆ ಪೂರಕವಾದ ನೈಸರ್ಗಿಕ ಬಣ್ಣ ಮತ್ತು ಮಣ್ಣಿನ ಗಣಪ ಬಳಸುವಂತೆ ತಿಳಿಸಿದರು. ಉಪ ಪೊಲೀಸ್ ಅಧೀಕ್ಷಕ ಮೋಹನ್ ಮಾತನಾಡಿ, ವೀರಾಜಪೇಟೆ ಪೊಲೀಸ್ ಉಪವಿಭಾಗದಲ್ಲಿ 101 ಗಣಪತಿ ಪ್ರತಿಷ್ಟಾಪನೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಗ್ರಾಮಾಂತರ ವಿಭಾಗದ 21 ಕಡೆಗಳಲ್ಲಿ ಗಣಪತಿ ಪ್ರತಿಷ್ಟಾಪನೆ ನಡೆಯಲಿದೆ. ಗೋಣಿಕೊಪ್ಪಲಿನಲ್ಲಿ ಒಟ್ಟು 15 ಹಾಗೂ ಶ್ರೀಮಂಗಲದಲ್ಲಿ 6 ಗಣಪ ಪ್ರತಿಷ್ಟಾಪನೆ ಮತ್ತು ವಿಸರ್ಜನೋತ್ಸವ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಡಿಜೆಗೆ ಅನುಮತಿ ಇಲ್ಲ : ಗಣಪತಿ ವಿಸರ್ಜನೋತ್ಸವ ಸಂದರ್ಭ ಸೆ.17ರಂದು ರಾತ್ರಿ ಯಾವದೇ ಅಹಿತಕರ ಘಟನೆ ನಡೆಯದಂತೆ ಅಪರಾಧ ನಿಗ್ರಹ ಪೊಲೀಸ್ ಪಡೆಯಿಂದ ವಿಡಿಯೋ ದಾಖಲಾತಿ ಮಾಡಲಾಗುತ್ತದೆಂದು ತಿಳಿಸಿದ ಡಿವೈಎಸ್‍ಪಿ ಮೋಹನ್, ಡಿಜೆ ಬಳಕೆಗೆ ಅನುಮತಿ ಇಲ್ಲ.ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ತಿಳಿಸಿದರಲ್ಲದೆ, ಪ್ರತಿಷ್ಟಾಪಿಸಲಾಗುವ ಗಣಪತಿ ಮೂರ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾ ಸಮಿತಿಯದ್ದೆಂದು ಸ್ಪಷ್ಟಪಿಸಿದರು. ಗೌರಿ ಗಣೇಶೋತ್ಸವ ಸಮಿತಿ ಒಕ್ಕೂಟ ಅಧ್ಯಕ್ಷ ಶಬರೀಶ್ ಅವರು ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಅವರು ಎಲ್ಲ ಉತ್ಸವ ಸಮಿತಿಗಳನ್ನು ಒಳಗೊಂಡ ಒಕ್ಕೂಟ ರಚನೆ ಹಾಗೂ ಬೈಲಾ ರಚನೆ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ಮಾದಂಡ ತಿಮ್ಮಯ್ಯ ಅವರು ಮಾತನಾಡಿ, ವೀರಾಜಪೇಟೆಯಲ್ಲಿ ಈ ಬಾರಿ 22 ಗೌರಿ ಗಣೇಶೋತ್ಸವ ಸಮಿತಿಯಿಂದ ಅದ್ಧೂರಿ ಉತ್ಸವದ ಆಚರಣೆ ನಡೆಯಲಿದೆ. ಗೌರಿ ಗಣೇಶೋತ್ಸವಕ್ಕೆ ಸರ್ಕಾರದ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು.