ಮಡಿಕೇರಿ NEWS DESK ಆ.26 : ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ಭಾರತ್ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾದ್ಯಂತ ಒಟ್ಟು 72,750 ರೂ.ಗಳನ್ನು ಸಂಗ್ರಹಿಸಿ ರಾಜ್ಯ ಸಮಿತಿಗೆ ಕಳುಹಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಹಾಗೂ ಸದಸ್ಯ ಎನ್.ಡಿ.ಕುಟ್ಟಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ, ನೆರೆಹಾವಳಿಯಿಂದ ಹಾನಿಗೀಡಾದ ಭಾಗದ ಸಂತ್ರಸ್ತರಿಗೆ ಮತ್ತು ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೊಂದಿರುವವರಿಗೆ ತುರ್ತು ಸಹಾಯಕ್ಕಾಗಿ ಪಕ್ಷದ ಕೇಂದ್ರ ಸಮಿತಿಯ ಸೂಚನೆಯಂತೆ ಜಿಲ್ಲೆಯಲ್ಲಿ ಹಣ ಸಂಗ್ರಹಿಸಲಾಯಿತು. ವಿರಾಜಪೇಟೆಯಲ್ಲಿ ರೂ.32,162, ಸಿದ್ದಾಪುರದಲ್ಲಿ ರೂ.26,210 ಮತ್ತು ನೆಲ್ಲಿಹುದಿಕೇರಿಯಲ್ಲಿ ರೂ.14,380 ಸಂಗ್ರಹಿಸಲಾಗಿದೆ. ಸಾರ್ವಜನಿಕರು, ವ್ಯಾಪಾರಿಗಳು, ಪಕ್ಷದ ಸದಸ್ಯರು, ಹಿತೈಷಿಗಳು ಸಹಾಯ ಮಾಡಿದ್ದು, ಇವರುಗಳಿಗೆ ಪಕ್ಷದ ಜಿಲ್ಲಾ ಸಮಿತಿಯಿಂದ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.