ಮಡಿಕೇರಿ NEWS DESK ಆ.26 : ರಾಷ್ಟ್ರದ ಗಡಿಗಳನ್ನು ಕಾಯುವ ಯೋಧ ಮತ್ತು ಆತನ ಮಗಳ ನಡುವಿನ ಆತ್ಮೀಯ ಸಂಬಂಧಗಳ ಹೂರಣವನ್ನು ಹೊಂದಿದ ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್ ಬೆಳ್ಳಿ” ರಾಜ್ಯದ ವಿವಿಧೆಡೆಗಳಲ್ಲಿ ಸೆ.13 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಸೇವೆಯಲ್ಲಿ ನಿರತ ಕೊಡಗಿನ ಯೋಧ, ಮನೆಯಲ್ಲಿ ಅಪ್ಪನ ಬರುವಿಕೆಗಾಗಿ ಕಾಯುವ ಪುಟ್ಟ ಮಗಳ ನಿರೀಕ್ಷೆ, ಬಾಂಧವ್ಯದ ಅಂಶಗಳನ್ನು ಒಳಗೊಂಡಂತೆ ದಿ ಜರ್ನಿ ಆಫ್ ಬೆಳ್ಳಿಯನ್ನು ನಿರ್ಮಿಸಲಾಗಿದೆ. ಇದು ಜಿಲ್ಲೆಯ ಕುಶಾಲನಗರ, ಸಿದ್ದಾಪುರ, ಶನಿವಾರಸಂತೆ ಸೇರಿದಂತೆ ರಾಜ್ಯದ ಸುಮಾರು 35 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆಯೆಂದು ಮಾಹಿತಿಯನ್ನಿತ್ತರು.
ಚಲನ ಚಿತ್ರ ನಿರ್ದೇಶಕಿ ಗೌರಿ ಶ್ರೀನಿವಾಸ್ ಮಾತನಾಡಿ, ಚಲನ ಚಿತ್ರದ ಯೋಧನ ಪಾತ್ರದಲ್ಲಿ ರಂಗಕರ್ಮಿ ಮಾಲತೇಶ್ ಅವರು ಮತ್ತು ಅವರ ಮಗಳಾಗಿ ಹುಬ್ಬಳ್ಳಿಯ ಸಂಗನಗೌಡ ಮತ್ತು ನಯನಾ ಪಾಟೀಲ ಅವರ ಪುತ್ರಿ ಹತ್ತರ ಪ್ರಾಯದ ಸಮನ್ವಿ ಎಸ್. ಪಾಟೀಲ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರ 1 ಗಂಟೆ 41 ನಿಮಿಷಗಳದ್ದಾಗಿದ್ದು, ಒಂದು ಹಾಡನ್ನು ಒಳಗೊಂಡಿದೆಯೆಂದು ತಿಳಿಸಿದರು. ಚಲನ ಚಿತ್ರದಲ್ಲಿ ಮಗುವಿನ ಅಜ್ಜಿಯಾಗಿ ಅಭಿನಯಿಸಿರುವ ಜಿಲ್ಲೆಯ ಹಿರಿಯ ಕಲಾವಿದೆ ತಾತಂಡ ಪ್ರಭಾ ನಾಣಯ್ಯ ಮಾತನಾಡಿ, ಚಲನಚಿತ್ರವನ್ನು ಹುದಿಕೇರಿಯ ಐನ್ ಮನೆ, ಅಲ್ಲಿನ ಶಾಲೆ, ಆಸ್ಪತ್ರೆ ಸೇರಿದಂತೆ ಕೆಲ ಸ್ಥಳಗಳಲ್ಲಿ ಚಿತ್ರಿಸಲಾಗಿದೆ. ಕಥಾ ಹಂದರಕ್ಕೆ ಪೂರಕವಾಗಿ ಕೊಡಗಿನ ಹಬ್ಬಗಳು, ಸಂಸ್ಕೃತಿಯನ್ನು ಇದರಲ್ಲಿ ತೋರಿಸಲಾಗಿದೆಯೆಂದು ತಿಳಿಸಿದರು.
ಚಲನಚಿತ್ರದ ಕೇಂದ್ರ ಬಿಂದುವಾಗಿರುವ ಯೋಧನ ಮಗಳ ಪಾತ್ರದಲ್ಲಿ ನಟಿಸಿರುವ ಸಮನ್ವಿ ಎಸ್. ಪಾಟೀಲ್, ಚಿತ್ರದಲ್ಲಿ ನಟಿಸಿರುವುದು ಹೊಸ ಅನುಭವವನ್ನು ನೀಡಿದೆಯಲ್ಲದೆ, ಕೊಡಗಿನ ಪರಿಸರ ತನಗೆ ಖುಷಿ ನೀಡಿದೆ. ನನ್ನ ಪ್ರಯತ್ನಕ್ಕೆ ಚಿತ್ರ ತಂಡ ಸೇರಿದಂತೆ ಅಪ್ಪ, ಅಮ್ಮ ಪ್ರೋತ್ಸಾಹ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದಳು.