ಕುಶಾಲನಗರ ಆ.28 NEWS DESK : ಪರಂಪರಾಗತ ಸಂಸ್ಕೃತಿಯನ್ನು ಅರಿಯಲು ಜಾನಪದ ಮುಖ್ಯ ಸಾಧನವಾಗಿದೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲ್ಲೂಕು ಘಟಕ ಹಾಗೂ ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ನಡೆದ ‘ವಿದ್ಯಾರ್ಥಿಗಳತ್ತ ಜಾನಪದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನದ ಹಾಸು ಹೊಕ್ಕಿನಲ್ಲಿ ಜಾನಪದ ಒಂದು ಸಾಮೂಹಿಕ ಸೃಷ್ಟಿಯಾಗಿದೆ. ಕಾಲಮಾನದ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಹೊಂದುತ್ತಾ ತನ್ನ ಜೀವಂತಿಕೆಯನ್ನು ಜಾನಪದ ಕಾಪಾಡಿಕೊಳ್ಳುತ್ತಿದೆ. ಅನಕ್ಷರತೆಯ ನಡುವೆ ಬದುಕಿನಲ್ಲಿ ಕಂಡುಕೊಂಡ ಜೀವನವೇ ಜನಪದವಾಗಿದೆ ಎಂದ ಅವರು, ಜನಪರ ಸಾಹಿತ್ಯದಲ್ಲಿ ಅಡಕಗೊಂಡಿರುವ ಜನಪದ ನೀತಿಯ ತಿರುಳುಗಳನ್ನು ಅರಿತು ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಉಪನ್ಯಾಸಕ ಹಾಗೂ ಜಾನಪದ ಕಲಾವಿದ ನಂಜುಂಡಸ್ವಾಮಿ ಮಾತನಾಡಿ, ಜನಪದೀಯ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ಒದಗಿಸುವುದರೊಂದಿಗೆ ಹಲವು ಜಾನಪದ ಹಾಡುಗಳನ್ನು ಹಾಡಿದರು. ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹಾ.ತಿ.ಜಯಪ್ರಕಾಶ್ ಚುಟುಕುಗಳನ್ನು ವಾಚಿಸಿದರು. ಕುಶಾಲನಗರ ತಾಲೂಕು ಜಾನಪದ ಪರಿಷತ್ ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿ, ಸೊಗಡನ್ನು ಪರಿಚಯಿಸುವ ಕಾರ್ಯವನ್ನು ಪರಿಷತ್ ಮೂಲಕ ಕಳೆದ 9 ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ನಾಗೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಜನಪದ ಪರಿಷತ್ ಗೆ ಸದಸ್ಯತ್ವ ನೋಂದಣಿ ಕಾರ್ಯ ನಡೆಸಲಾಯಿತು. ಕಲಾವಿದ ನಂಜುಂಡಸ್ವಾಮಿ ಹಾಗೂ ಉಪನ್ಯಾಸಕ ನಂದೀಶ್, ಬಿ.ಜಿ.ಶಾಂತಿ, ಪ್ರಿಯಾಂಕ ಜಾನಪದ ಗೀತೆ ಹಾಡಿದರು. ಉಪನ್ಯಾಸಕ ಫಿಲಿಪ್ ವಾಸ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಡಿ.ರಾಜು ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರ ಮೋಹನ್, ಶಶಿಕಾಂತ್ ರೈ, ವಿನೋದ್, ಡಿ.ಆರ್.ಸೋಮಶೇಖರ್ ಸೇರಿದಂತೆ ಪರಿಷತ್ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಉಪನ್ಯಾಸಕ ವೃಂದದವರು ಇದ್ದರು. ವಿದ್ಯಾರ್ಥಿನಿ ಲಕ್ಷ್ಮಿ ಪ್ರಾರ್ಥನೆ ಕೆ.ಕೆ.ನಾಗರಾಜ ಶೆಟ್ಟಿ ಸ್ವಾಗತಿಸಿದರು. ಟಿ.ಆರ್.ಪ್ರಭುದೇವ್ ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್ ವಂದಿಸಿದರು.