

ವಿರಾಜಪೇಟೆ ಆ.29 NEWS DESK : ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ, ಅರ್ಥಶಾಸ್ತ್ರ ವಿಭಾಗ ಹಾಗೂ ವಿವೇಕ ಬಳಗದ ಸಂಯುಕ್ತ ಆಶ್ರಯದಲ್ಲಿ “ಪುಣ್ಯ ಭೂಮಿ ಭಾರತದ ಮಹಿಮೆ” ಎಂಬ ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉಡುಪಿ ಡಿವೈನ್ ಪಾರ್ಕ್ ನ ಡಿ.ಎಸ್.ಯಶವಂತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭವ್ಯ ಭಾರತದ ಮಹಿಮೆಯನ್ನು, ಭಾರತದ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಮುಟ್ಟಿಸಿದ ಸ್ವಾಮಿ ವಿವೇಕಾನಂದರ ದಿವ್ಯ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರತಿಯೊಬ್ಬರು ಭಾರತದ ಮಹಿಮೆಯನ್ನು ಗೌರವಿಸಬೇಕು. ಭಾರತೀಯ ಆಚಾರ ವಿಚಾರ, ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಹೇಳಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಬಸವರಾಜು ಮಾತನಾಡಿ, ನಾವೆಲ್ಲರೂ ಭಾರತೀಯರು. ನಮ್ಮಲ್ಲಿ ಯಾವುದೇ ಜಾತಿ, ಮತ, ಪಂಥ, ಭಾಷೆಯ ಆಧಾರದ ಮೇಲೆ ಭಿನ್ನತೆ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ದೇಶದ ಮೇಲೆ ಪ್ರೀತಿ ಇರಬೇಕು. ನಮ್ಮಲ್ಲಿ ಯಾವುದೇ ಭೇದ ಭಾವಗಳು ಇರಬಾರದು. ಹಿರಿಯರು ಹಾಗೂ ಗುರುಗಳನ್ನು ಗೌರವದಿಂದ ಕಾಣಬೇಕು ಎಂದರು. ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿವೇಕ ಬಳಗದ ಕುಮಾರ, ಶಶಿಕಲಾ, ಭಾಸ್ಕರ್, ಅರ್ಥಶಾಸ್ತ್ರ ಉಪನ್ಯಾಸಕರಾದ ವೀಣಾ, ಗೀತಾ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.








