ಮಡಿಕೇರಿ NEWS DESK ಆ.30 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ದಸರಾ ದಶಮಂಟಪ ಸಮಿತಿ ನಿರ್ಧರಿಸಿದೆ. ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಧ್ವನಿವರ್ಧಕ ಬಳಸಲು ಅವಕಾಶ ಕಲ್ಪಿಸಬೇಕು, ನಗರದ ರಸ್ತೆಗಳನ್ನು ದುರಸ್ತಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಮಿತಿಯ ಪ್ರಮುಖರು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರಿಗೆ ಇಂದು ಸಲ್ಲಿಸಿದರು. ದಶಮಂಟಪ ಸಮಿತಿಯ ಅಧ್ಯಕ್ಷ ಜಿ.ಸಿ.ಜಗದೀಶ್ ಅವರ ನೇತೃತದಲ್ಲಿ ನಗರದಲ್ಲಿ ಶಾಸಕರನ್ನು ಭೇಟಿಯಾದ ಸಮಿತಿಯ ಪದಾಧಿಕಾರಿಗಳು ಬೇಡಿಕೆಗಳನ್ನು ದಸರಾ ಉತ್ಸವಕ್ಕೂ ಮೊದಲೇ ಈಡೇರಿಸಬೇಕು ಎಂದು ಮನವಿ ಮಾಡಿದರು. ಕಳೆದ ವರ್ಷ ಶೋಭಾಯಾತ್ರೆಯ ಸಂದರ್ಭ ಕೆಲವೊಂದು ಸಮಸ್ಯೆಗಳು ಎದುರಾಗಿತ್ತು. ಈ ಬಾರಿ ಅದು ಮರುಕಳಿಸದಂತೆ ನೋಡಿಕೊಂಡು ಅಧಿಕಾರಿಗಳ ವಿಶ್ವಾಸಗಳಿಸಿ ಅದ್ದೂರಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕರ ಗಮನ ಸೆಳೆದರು. ಕಳೆದ ವರ್ಷ ದಶಮಂಟಪಗಳ ಪೈಪೋಟಿ ನಡುವೆ ಅಬ್ಬರದ ಧ್ವನಿವರ್ಧಕ(ಡಿಜೆ) ಬಳಸಿದ ಕಾರಣ ಪ್ರಕರಣ ಪೊಲೀಸ್ ಇಲಾಖೆ ಮೆಟ್ಟಿಲೇರಿತ್ತು. ಈ ಬಾರಿ ಸಮಿತಿ ಸಭೆಯ ನಿರ್ಣಯದಂತೆ ಕಥಾ ದೃಶ್ಯಾವಳಿ ಸಂದರ್ಭ ಮಿತವಾದ ಸಂಗೀತ ಬಳಸಲು ಅವಕಾಶ ಒದಗಿಸಿಕೊಡಬೇಕು. ದಸರಾ ಮರುದಿನ ಮಂಟಪಗಳು ಕಳಸ ಸಹಿತ ದೇವಾಲಯಕ್ಕೆ ಮರಳುವವರೆಗೂ ಇದನ್ನು ಪಾಲಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ. ಈ ಬಗ್ಗೆ ಶಾಸಕರು ದಸರಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಮಿತ ಸಂಗೀತಕ್ಕೆ ಅವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
::: ಹೆಚ್ಚಿನ ಅನುದಾನ :::
ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ದಶಮಂಟಪಗಳಿಗೆ ತಲಾ 8 ಲಕ್ಷ ರೂ. ಮತ್ತು 4 ಶಕ್ತಿ ದೇವತೆಗಳ ಕರಗಗಳನ್ನು ಹೊರಡಿಸುವ ದೇವಾಲಯಗಳಿಗೆ ತಲಾ 5 ಲಕ್ಷ ರೂ. ಹೆಚ್ಚಿನ ಅನುದಾನ ನೀಡಬೇಕೆಂದು ದಶಮಂಟಪ ಸಮಿತಿ ಪದಾಧಿಕಾರಿಗಳು ಶಾಸಕರಲ್ಲಿ ಕೋರಿಕೊಂಡರು.
::: ರಸ್ತೆ ಅವ್ಯವಸ್ಥೆ :::
ಮಡಿಕೇರಿ ದಸರಾ ಉತ್ಸವಕ್ಕೆ ಕರಗಗಳ ಪ್ರದಕ್ಷಿಣೆ ಮೂಲಕ ಅಕ್ಟೋಬರ್ 3ರಂದು ಚಾಲನೆ ದೊರೆಯಲಿದೆ. ಅ.12 ಮತ್ತು 13ರಂದು ದಶ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ. ತೀವ್ರ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದಿದ್ದು, ದಸರಾ ಉತ್ಸವಕ್ಕೂ ಮೊದಲೇ ಡಾಂಬರೀಕರಣ ಮಾಡಬೇಕು. ಶೋಭಾಯಾತ್ರೆ ನಡೆಯುವ ಮುಖ್ಯ ರಸ್ತೆಗಳು ಮತ್ತು ಬನ್ನಿ ಕಡಿದು ಕಳಸ ಸಹಿತ ಮಂಟಪಗಳು ಮರಳುವ ರಸ್ತೆಗಳಲ್ಲಿ ಕಳೆದ ವರ್ಷ ವಾಹನಗಳು ಸಂಚರಿಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಮಂಟಪಗಳು ಮರಳುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಜಿ.ಸಿ.ಜಗದೀಶ್ ಹಾಗೂ ಪದಾಧಿಕಾರಿಗಳು ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದರು.