ಮಡಿಕೇರಿ ಆ.30 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸೆ.1 ರಂದು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಮಂದ್ ನಲ್ಲಿ 29ನೇ ವರ್ಷದ ಸಾರ್ವತ್ರಿಕ “ಕೈಲ್ ಪೊಳ್ದ್ ” ಹಬ್ಬವನ್ನು ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಂದ್ ನಲ್ಲಿ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗೆ ಪ್ರಕೃತಿ ವರವಾಗಿ ನೀಡಿರುವ “ತೋಕ್ ಪೂವ್” ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಗುವುದು. ನಂತರ ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‍ಸಿ ಹೋರಾಟಕ್ಕೆ ಬೆಂಬಲ ಕೋರಲಾಗುವುದು. ಮಾಜಿ ರಾಜ್ಯಸಭಾ ಎಂ.ಪಿ, ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೊಡವ ಕುಲದ ಉದ್ಭವ, ವಿಕಾಸ ಮತ್ತು ಕೊಡವ ತಾಯಿನೆಲದ ಸೃಷ್ಟಿ ಈ ಮಣ್ಣಿನಲ್ಲಿ ಆರ್ವಿಭವಿಸಿದೆ. ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಬುಡಕಟ್ಟು ಜನಾಂಗದ ಕೊಡವರಲ್ಲಿ ಹುಟ್ಟಿನಿಂದಲೂ ಅಂತರ್ಗತವಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಶಾಶ್ವತ ಹಕ್ಕಾಗಿದೆ. ಈ ಭೂಮಿಯಲ್ಲಿ ಮಾನವ ಸಮುದಾಯದ ಉತ್ಪತ್ತಿಯ ಲಾಗಯಿತು ಕೊಡವ ಯೋಧ ಪ್ರವೃತ್ತಿ ಅನುವಂಶಿಕವಾಗಿ ಬಂದಿದ್ದು, ಅದನ್ನು ಜತನದಿಂದ ಕಾಯ್ದುಕೊಳ್ಳುತ್ತ ಬರಲಾಗಿದೆ. ತೋಕ್/ಬಂದೂಕು ಮತ್ತು ಭೂಮಿಯೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. “ಸಂಸ್ಕಾರ ಗನ್ / ಶಸ್ತ್ರಾಸ್ತ್ರಗಳು” ಕೊಡವ ಜನಾಂಗದ ಹುಟ್ಟು ಮತ್ತು ಸಾವು ಹಾಗೂ ಕೊಡವ ಕುಲದ ವಿಕಾಸವನ್ನು ಸಾಕ್ಷೀಕರಿಸುತ್ತಿವೆ. ಈ ಪವಿತ್ರ ಕೊಡವ ತಾಯ್ನಾಡಿನಲ್ಲಿ ಬಂದೂಕು ಕೊಡವ ಜನಾಂಗದ ಸಮರ ಪರಂಪರೆಗೆ ಮತ್ತು ಪೂರ್ವಜರ ಪ್ರಾಚೀನತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಭೂ ದೇವಿ, ಜಲದೇವಿ, ವನದೇವಿ, ಪರ್ವತ ದೇವಿ ಮತ್ತು ಪ್ರಕೃತಿ, ಬಂದೂಕ ಮತ್ತು ಮಂದ್‍ಗಳು ಕೊಡವರ ಆತ್ಮ ಮತ್ತು ಹೃದಯದಂತೆ ನಮ್ಮೊಂದಿಗಿದೆ. ಯಾವುದೇ ಒಂದು ಸಿದ್ಧಾಂತ ಕಳೆದು ಹೋದರೂ, ಅದು ಕೊಡವ ಜನಾಂಗಕ್ಕೆ ಪಾಶ್ರ್ವಾವಾಯು ಬಡಿದಂತೆ ದೊಡ್ಡ ವಿಪತ್ತು ಉಂಟಾಗಲಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ “ಕೈಲ್ ಪೊಳ್ದ್” ಹಬ್ಬ ಆಚರಣೆಯ ಸಂದರ್ಭ ಕೊಡವ ಲ್ಯಾಂಡ್ ಭೂ ರಾಜಕೀಯ ಸೇರಿದಂತೆ ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್‍ಗಳ ಆರ್ಟಿಕಲ್ 244, 371(ಕೆ) ಆರ್/ಡಬ್ಲ್ಯೂ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತವನ್ನು ಮಾನ್ಯ ಮಾಡಬೇಕು, ವಿಶ್ವ ರಾಷ್ಟ್ರ ಸಂಸ್ಥೆ ಕಲ್ಪಿಸಲ್ಪಟ್ಟ ಆದಿಮಸಂಜಾತ ಬುಡಕಟ್ಟು ಜನರ ಹಕ್ಕುಗಳ ಅಡಿಯಲ್ಲಿ ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಘೋಷಿಸಲ್ಪಟ್ಟ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವರ ಎಲ್ಲಾ ಹಕ್ಕುಗಳ ರಕ್ಷಣೆಯಾಗಬೇಕು. ಆರ್ಟಿಕಲ್ 340 ಮತ್ತು 342 ರ ಅಡಿಯಲ್ಲಿ ಕೊಡವ ಜನಾಂಗಕ್ಕೆ ಎಸ್‍ಟಿ ಟ್ಯಾಗ್ ನೀಡಬೇಕು. ನಮ್ಮ ಮಾತೃ ಭಾಷೆಯಾದ ಕೊಡವ ತಕ್ಕ್ ಅನ್ನು ಸಂವಿಧಾನದ 8ನೇ ಶೆಡ್ಯೂಲ್‍ನಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ ಸಂಸ್ಕಾರ ಗನ್ ನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳಲ್ಲಿ ಸೇರ್ಪಡೆಗೊಳಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿತ್ವ ಮತ್ತು ಕಾನೂನಾತ್ಮಕ ವ್ಯಕ್ತಿಯ ಸ್ಥಾನಮಾನ ನೀಡಬೇಕು ಮತ್ತು ಜಲ ದೇವತೆ ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಯನ್ನು ಸರ್ಕಾರವು ಕೊಡವ ಜನಾಂಗದ ಪವಿತ್ರ ತೀರ್ಥ ಯಾತ್ರಾ ಕೇಂದ್ರವಾಗಿ ಪರಿಗಣಿಸಬೇಕು, ಪ್ರವಾಸಿ ಕೇಂದ್ರವಾಗಿ ಪರಿಗಣಿಸಬಾರದು. ಹೆಲ್ಸಿಂಕಿ ನಿಯಮ 1966ರ ಪ್ರಕಾರ ಕಾವೇರಿಯ ನೀರಿನ ಪಾಲನ್ನು ಕೊಡವಲ್ಯಾಂಡ್‍ಗೆ ಹಂಚಿಕೆ ಮಾಡಬೇಕು. ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಹಿನ್ನೆಲೆ ಸ್ಮಾರಕಗಳನ್ನು ನಿರ್ಮಿಸಬೇಕು. ಉಲುಗುಲಿ-ಸುಂಟಿಕೊಪ್ಪ ಹಾಗೂ ಮುಳ್ಳುಸೋಗೆಯಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಸಂವಿಧಾನದ ವಿಧಿ 49ರ ಅಡಿಯಲ್ಲಿ ದೇವಟ್‍ಪರಂಬ್‍ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕು. ಜನಸಂಖ್ಯಾ ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಾಮುದಾಯಿಕ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ-ಪಾರಮಾರ್ಥಿಕ ಸ್ಥಾನಗಳಾದ ಮಂದ್, ದೇವಕಾಡ್ ಮತ್ತು ಈ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ರಕ್ಷಿಸಲು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ಲೈನ್‍ಪರ್ಮಿಟ್ (ಐಎಲ್‍ಪಿ) ಜಾರಿಗೆ ತರಬೇಕೆಂದು ಸಿಎನ್‍ಸಿ ಕೋರುತ್ತದೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ “ಸಂಘ” ಅಮೂರ್ತ ಮತಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಎಲ್ಲಾ ಕೊಡವರು ಹಾಗೂ ಕೊಡವತಿಯರು “ಕೈಲ್ ಪೊಳ್ದ್”ನಲ್ಲಿ ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳಲು ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಬರಲು ವಿನಂತಿಸಿದ್ದಾರೆ. ಹಬ್ಬದ ಪ್ರಯುಕ್ತ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರುಚಿಕರವಾದ ಕೊಡವರ “ಕೈಲ್ ಪೊಳ್ದ್” ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.