ಸೋಮವಾರಪೇಟೆ ಆ.30 NEWS DESK : ಭಾರತದ ವಿವಿಧೆಡೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಖಂಡಿಸಿ ವಿವಿಧ ಮಹಿಳಾ ಸಂಘಟನೆಗಳು ಸೋಮವಾರಪೇಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಮಹಿಳಾ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ರಚಿಸಿ, ಸರ್ಕಾರದ ವ್ಯವಸ್ಥೆ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮೂಲಕ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರಗತಿಪರ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪೂರ್ಣಿಮಾ ಗೋಪಾಲ್ ಮಾತನಾಡಿ, ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ಕೊಡಬಾರದು. ಕಾನೂನು ಮತ್ತಷ್ಟು ಬಿಗಿ ಪಡಿಸಬೇಕು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಇನ್ನರ್‍ವೀಲ್ ಸಂಸ್ಥೆ, ರೋಟರಿ ಸಂಸ್ಥೆ, ಅಕ್ಕನ ಬಳಗ, ಲಯನ್ಸ್ ಸಂಸ್ಥೆ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ, ಬಿ.ಜೆ.ಪಿ ಮಹಿಳಾಮೋರ್ಚಾ, ಲೇಖಕಿಯರ ಬಳಗ ಸೇರಿದಂತೆ ಮತ್ತಿತರ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.