ಮಡಿಕೇರಿ NEWS DESK ಸೆ.1 : ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ಪಾಲಂಗಾಲ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳಿಗೆ ವಿರಾಜಪೇಟೆಯ ಜೈ ಭಾರತ್ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಪುಸ್ತಕ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎನ್.ಶಿವು ನಮ್ಮ ಸಂಘ ನಿರಂತರವಾಗಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ರಕ್ತದಾನ ಶಿಬಿರ ನಡೆಸಿದೆ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಮತ್ತಿತರ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ಮಾಡಿದೆ. ಈ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಆಟೋ ಚಾಲಕರು ಹಾಗೂ ಮಾಲೀಕರು ನೀಡುತ್ತಿರುವ ಸಂಪೂರ್ಣ ಸಹಕಾರವೇ ಕಾರಣವಾಗಿದೆ. ಇನ್ನು ಮುಂದೆಯೂ ಸಂಘ ಇದೇ ರೀತಿಯ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಗ್ರಾ.ಪಂ ಉಪಾಧ್ಯಕ್ಷ ಎಂ.ಎಂ.ಪರಮೇಶ್ವರ್ ಅವರು ಮಾತನಾಡಿ ಆಟೋ ಚಾಲಕರು ಹಾಗೂ ಮಾಲೀಕರ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುತ್ತಿರುವುದು ಶ್ಲಾಘನೀಯ. ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನಾರ್ಹರು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಸಂಘದಿಂದ ನಡೆಯಲಿ ಎಂದು ಹಾರೈಸಿದರು. ಸಂಘದ ಗೌರವಾಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಕೆ.ಜೀವನ್, ಖಜಾಂಚಿ ಅರ್ಜುನ್ ತಿಮ್ಮಯ್ಯ, ಕಾರ್ಯದರ್ಶಿ ಜಾಕೂಬ್ ನರೋನ್, ಕಾರ್ಯದರ್ಶಿ ಬೆಳ್ಳಿಯಪ್ಪ ಪುಟ್ಟ, ಸದಸ್ಯ ಈರಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಶೀಲಾ ಮೇದಪ್ಪ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.