ವಿರಾಜಪೇಟೆ ಸೆ.11 NEWS DESK : ವಿದ್ಯಾರ್ಥಿಗಳು ಶಿಕ್ಷಣದ ಹಂತದಿಂದಲೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿತಿಮತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಕರೆ ನೀಡಿದರು. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಸ್ವ ಇಚ್ಛೆಯಿಂದ ಮಾಡಬೇಕು. ಆ ನಿಟ್ಟಿನಲ್ಲಿ ಎನ್.ಎಸ್.ಎಸ್ ಮತ್ತು ರೆಡ್ ಕ್ರಾಸ್ ಘಟಕಗಳ ಸಾಮಾಜಿಕ ಕಾರ್ಯಗಳು ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು. ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪರರ ಸೇವೆಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆಗೆ ಬದ್ಧರಾಗಿರಬೇಕು. ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸವು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಮಾನವೀಯ ಆದರ್ಶಗಳನ್ನು ಬೆಳೆಸಿ ಸಮಾಜ ಹಾಗೂ ರಾಷ್ಟ್ರಕ್ಕೆ ಕೊಡುಗೆಯನ್ನು ನೀಡಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳು ಪ್ರಮುಖ ಘಟಕಗಳಾಗಿದ್ದು, ವಿದ್ಯಾರ್ಥಿಗಳು ಈ ಘಟಕಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು. ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ಸೃಜನ ದೇಚಮ್ಮ ನಿರೂಪಿಸಿದರು, ಪ್ರತೀಕ್ ಸ್ವಾಗತಿಸಿದರು, ಸುಧಾ ವಂದಿಸಿದರು. ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಜಿಲ್ಲಾ ಮಟ್ಟದ ಮ್ಯಾರಥಾನ್ ನಲ್ಲಿ ಭಾಗವಹಿಸಿದ ಎನ್. ಎಸ್. ಎಸ್. ವಿದ್ಯಾರ್ಥಿಗಳಿಗೆ ಪ್ರಶಂಸನ ಪತ್ರ ನೀಡಲಾಯಿತು.