ಮಡಿಕೇರಿ ಸೆ.17 NEWS DESK : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತದ ಮೀಸಲಾತಿ ವ್ಯವಸ್ಥೆ ಕುರಿತು ಅಮೆರಿಕಾದಲ್ಲಿ ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ಅವರು, ಪರಿಶಿಷ್ಟರ ಭಾವನೆಗೆ ವಿರುದ್ಧವಾದ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ತಕ್ಷಣ ವಜಾಗೊಳಸಬೇಕೆಂದು ಒತ್ತಾಯಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದುಕೊಂಡು ದೇಶದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳದೆ ವಿದೇಶದಲ್ಲಿ ಅಗೌರವದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿ, ಹಿಂದುಳಿದ ವರ್ಗಗಳಿಗೆ ಸೀಮಿತವಾಗಿರುವ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಅಮೆರಿಕಾದಲ್ಲಿ ಹೇಳಿಕೆ ನೀಡಿದ್ದು, ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡರ್ ಅವರ ಆಶಯಕ್ಕೆ ತಿಲಾಂಜಲಿ ಇಡುವ ಹುನ್ನಾರ ಕಾಂಗ್ರೆಸ್ ಪಕ್ಷದಲ್ಲಿ ನಡೆಯತ್ತಿದ್ದು, ಕಳೆದ 50-60 ವರ್ಷಗಳಿಂದ ಶೋಷಿತ ಸಮುದಾಯವನ್ನು ದಿಕ್ಕು ತಪ್ಪಿಸುತ್ತಾ ಬಂದಿದೆ. ಇದೀಗ ಮೀಸಲಾತಿಯನ್ನು ತೆಗೆದು ಹಾಕುವುದಾಗಿ ಬಹಿರಂಗ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಬಣ್ಣವನ್ನು ಬಯಲು ಮಾಡಿದ್ದಾರೆ. ಪರಿಶಿಷ್ಟರು, ಆದಿವಾಸಿಗಳು, ಹಿಂದುಳಿದ ವರ್ಗದವರು, ನೊಂದ ಬಡವರು ಕೇವಲ ಮತ ನೀಡುವುದಕ್ಕಾಗಿ ಮಾತ್ರ ಸಾಕು, ಇವರ ಅಭ್ಯುದಯ ಯಾರಿಗೆ ಬೇಕು ಎನ್ನುವ ಮನೋಸ್ಥಿತಿ ಬಹಿರಂಗವಾಗಿದೆ ಎಂದು ಎಂ.ಎಂ.ಪರಮೇಶ್ವರ ಆರೋಪಿಸಿದರು. ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನವನ್ನು ರದ್ದುಪಡಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಲೋಕಸಭೆಯ ಸ್ಪೀಕರ್‍ಗೆ ಸಲ್ಲಿಸಿದರು. ಎಸ್.ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಮಂಜುಳ ಕೆ.ಆರ್, ರಾಜ್ಯ ಸದಸ್ಯ ಪ್ರಭಾಕರ್ ಕೆ.ಆರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಎಸ್.ಟಿ ಮೋರ್ಚಾದ ವಿರಾಜಪೇಟೆ ಮಂಡಲ ಅಧ್ಯಕ್ಷ ಮುತ್ತುರಾಜ್, ಕಾರ್ಯಕಾರಿಣಿ ಸದಸ್ಯ ಅಪ್ಪಾಜಿ, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ, ಮಡಿಕೇರಿ ನಗರಸಭೆಯ ಬಿಜೆಪಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.