ನಾಪೋಕ್ಲು ಸೆ.20 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ವಿನೂತನ ಕಾರ್ಯಕ್ರಮ ಮದ್ಯವರ್ಜನ ಶಿಬಿರ ಸಾಮಾಜಿಕ ಬದಲಾವಣೆಗೆ ಸಹಕಾರಿ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಮಡಿಕೇರಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಬೆಟ್ಟಗೇರಿ ವಲಯ, ತಾಲೂಕು ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮಡಿಕೇರಿ ತಾಲೂಕು, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದೊಂದಿಗೆ ಚೇರಂಬಾಣೆ ಗೌಡ ಸಮಾಜ, ಬೆಟ್ಟಗೇರಿ ವಲಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಬೆಟ್ಟಗೇರಿ ಗ್ರಾ.ಪಂ, ಬೇಂಗೂರು – ಚೇರಂಬಾಣೆ ಗ್ರಾ.ಪಂ, ಚೇರಂಬಾಣೆ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾಗಮಂಡಲ ಆರಕ್ಷಕ ಇಲಾಖೆ, ಮಡಿಕೇರಿ ನವಜೀವನ ಸಮಿತಿ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯುಕ್ತಾಶ್ರಯದಲ್ಲಿ ಕಾರುಗುಂದ ಕೊಡವ ಸಮಾಜದಲ್ಲಿ ಮದ್ಯವರ್ಜನ ಶಿಬಿರ ನಡೆಯಿತು. ಸಂಸ್ಥೆಯ ಮೂಲಕ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಕಛೇರಿ ಬೆಳ್ತಂಗಡಿಯ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮದ್ಯವರ್ಜನ ಶಿಬಿರ ಮನ ಪರಿವರ್ತನೆಯ ಕಾರ್ಯಕ್ರಮ ಎಂದರು. ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಟಿ.ಎಂ.ಅಯ್ಯಪ್ಪ, ಅಧ್ಯಕ್ಷ ಬೆಳ್ಯನ ಚಂದ್ರಪ್ರಕಾಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ಬಿ ಅಭಿಮನ್ಯು ಕುಮಾರ್ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಧನಂಜಯ್ ಅಗೋಳಿಕಜೆ, ಕ್ಷೇತ್ರ ಯೋಜನಾಧಿಕಾರಿ ಪುರುಷೋತ್ತಮ, ಬೆಟ್ಟಗೇರಿ ಗ್ರಾ.ಪಂ ಅಧ್ಯಕ್ಷೆ ಕಮಲ ಉತ್ತಯ್ಯ, ಬೇಂಗೂರು ಗ್ರಾ.ಪಂ ಅಧ್ಯಕ್ಷೆ ಮಿಲನ್ ಮುತ್ತಣ್ಣ, ಚೇರಂಬಾಣೆ ಕೊಡವ ಸಮಾಜ ಮಾಜಿ ಅಧ್ಯಕ್ಷ ಕುಟ್ಟೇಟ್ಟಿರ ಕುಂಞಪ್ಪ, ಕಾರುಗುಂದ ಒಕ್ಕೂಟ ಅಧ್ಯಕ್ಷೆ ಜಯಂತಿ, ಮದೆ ಗ್ರಾ.ಪಂ ಸದಸ್ಯ ತೇಜಕುಮಾರ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಅಯ್ಯಣ್ಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಗೌಡ ಸಮಾಜದ ನಿರ್ದೇಶಕ ಕೊಡಗನ ತೀರ್ಥಪ್ರಸಾದ್ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.