
ಮಡಿಕೇರಿ ಆ.19 NEWS DESK : ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಂಡರ್-17 ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಜೀವಿತ್ ಚಂಗಪ್ಪ ಹಾಗೂ ಶೋಬಿತ್ ಕೆ.ಎಲ್. ಅವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವುದು ಶಾಲೆ ಹಾಗೂ ಕೊಡಗು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ತಂಡದಲ್ಲಿ ಫಾರ್ವರ್ಡ್ ಆಟಗಾರರಾಗಿ ಹರ್ಷಿತ್ ಬಿ. ನಾಯಕ್, ಸಾಯಿ ತಿಮ್ಮಯ್ಯ, ಹಾಗೂ ಜೀವಿತ್ ಚಂಗಪ್ಪ ಗೋಲ್ ಕೀಪರ್ ಆಗಿ ಶೋಬಿತ್ ಕೆ.ಎಲ್. ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಶಾಲೆಯ ಕ್ರೀಡಾ ತರಬೇತುದಾರರಾದ ಹಂಚೆಟ್ಟಿರ ಈರಪ್ಪ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಕರ್ನಾಟಕ ತಂಡವು ಆಗಸ್ಟ್ 21ರಂದು ಬೆಂಗಳೂರಿನ ಬಿಷಪ್ ಕಾಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗೋವಾ ರಾಜ್ಯದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮಡಿಕೇರಿಯಿಂದ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ನಾಲ್ವರು ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕೊಡಗು ಜಿಲ್ಲೆಯ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.








