ಕುಶಾಲನಗರ NEWS DESK ಸೆ.20 : ಕುಶಾಲನಗರ ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸೆ.25ರಂದು ನಿಗದಿಯಾಗಿದೆ. ಇಬ್ಬರು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಹಶೀಲ್ದಾರ್ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಮುಖರು ಹಾಗೂ ಪುರಸಭೆಯ ಬಿಜೆಪಿ ಸದಸ್ಯರು ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ ನಾಮನಿರ್ದೇಶಿತ ಸದಸ್ಯರುಗಳಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವುದಿಲ್ಲ. ತಹಶೀಲ್ದಾರರು ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ.ಮನು ಮಾತನಾಡಿ, 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಿಯಮಬಾಹಿರವಾಗಿ ಮುಳ್ಳುಸೋಗೆ ಭಾಗದ ಇಬ್ಬರು ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವಂತೆ ತಿಳಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ನಡುವೆ ಮಡಿಕೇರಿಗೆ ತೆರಳುತ್ತಿದ್ದ ವಿರೋಧ ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆ ಸಂದರ್ಭ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. ಅನಗತ್ಯವಾಗಿ ಗೊಂದಲ ಮಾಡುವುದು ಬೇಡ. ತಾನು ಕೂಡ ಕಂದಾಯ ಇಲಾಖೆಯ ಹಾಗೂ ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಅನಗತ್ಯವಾಗಿ ಕರ್ತವ್ಯ ಲೋಪಕ್ಕೆ ಸಿಲುಕಬೇಡಿ, ಚುನಾವಣೆ ವಿಚಾರದಲ್ಲಿ ಕೆಟ್ಟ ಪರಂಪರೆ ಅನಾಹುತಕ್ಕೆ ಅವಕಾಶ ಕಲ್ಪಿಸಬಾರದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಅಶೋಕ್ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ವಿರಾಜಪೇಟೆ ಅಧ್ಯಕ್ಷ ಸುವಿನ್ ಗಣಪತಿ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಗೌತಮ್ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಸದಸ್ಯರಾದ ದೀಪಕ್, ಮಂಜುಳಾ, ಸುನಿಲ್, ಕುಶಾಲನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಪುರಸಭೆ ಸದಸ್ಯರಾದ ಡಿ.ಕೆ.ತಿಮ್ಮಪ,್ಪ ಅಮೃತರಾಜ್ ಜಯವರ್ಧನ್, ರೇಣುಕಾ ಮತ್ತಿತರರು ಇದ್ದರು.