ಸಿದ್ದಾಪುರ ಸೆ.23 NEWS DESK : ಜಿಲ್ಲಾ ಕೃಷಿ ವಿಜ್ಞಾನ ಸಂಸ್ಥೆಯ ಹಾಗೂ ಓ.ಡಿ.ಪಿ ಸಂಸ್ಥೆ ಸಹ ಭಾಗಿತ್ವದಲ್ಲಿ ರೈತ ಮಹಿಳೆಯರಿಗೆ ಒಂದು ದಿನದ ಕೃಷಿ ಚಟುವಟಿಕೆಗಳ ತರಬೇತಿ ಶಿಬಿರ ನಡೆಯಿತು. ಸಿದ್ದಾಪುರ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಗೋಪಾಲ ಉದ್ಘಾಟಿಸಿದರು. ನಂತರ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಡಾ.ದೇವರಾಜ್ ಮಾತನಾಡಿ, ಜಿಲ್ಲೆಯಾದ್ಯಂತ ಪೌಷ್ಠಿಕ ಕೃಷಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ರೈತ ಮಹಿಳೆಯರು ತಮ್ಮ ಕೈತೋಟದಲ್ಲಿ ಪೌಷ್ಠಿಕವಾಗಿ ತಾಜಾ ತರಕಾರಿ ಬೆಳೆಗಳನ್ನು ಯಾವ ರೀತಿ ಬೆಳೆಯುವ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಸ್ವರ್ಣ ಮಾತನಾಡಿ, ಆಧುನಿಕ ಕೃಷಿ ಪದ್ಧತಿ ಬೇಸಾಯ ಹೊಸ ತಳಿಗಳ ಬಗ್ಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದ್ದು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ತೋಟಗಾರಿಕೆ ವಿಸ್ತರಣೆ ವಿಭಾಗದ ಲತ ಮಾತನಾಡಿ ಬೆಳೆಗಳಿಗೆ ಬರುವ ರೋಗಗಳು, ಕೀಟನಾಶಕ ಹಾಗೂ ಆರ್ಥಿಕ ಬೆಳೆಗಳಾಗಿ ಆರ್ಥಿಕ ಹೂವಿನ ಉತ್ಪನ್ನಗಳ ಮತ್ತು ಅದರ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು. ಒಡಿಪಿ ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಾಯ್ಸ್ ಮೆನೇಜಸ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಪಶು ಸಂಗೋಪನೆ, ಸ್ವಾ ಉದ್ಯೋಗ ಗಳ ಕುರಿತು ತರಬೇತಿ ಮತ್ತು ಸಾಮಗ್ರಿಗಳನ್ನು ನೀಡುತ್ತಿದ್ದು, ಮಹಿಳೆಯರು ಸ್ವಹ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಮುಖ್ಯ ವಾಹಿನಿಗೆ ಬರಬೇಕೆಂದರು. ಈ ಸಂದರ್ಭ ಗ್ರಾ.ಪಂ ಮಾಜಿ ಅಧ್ಯಕ್ಷರಾದ ರೀನಾ ತುಳಸಿ, ಮಾಲ್ತಾರೆ ಆರೋಗ್ಯ ಇಲಾಖೆಯ ಡಾ.ಚೈತನ್ಯ, ಪ್ರಮುಖರಾದ ಪ್ರಮೀಳಾ, ದೇವಜಾನು, ಧನುಕುಮಾರ್, ರೀಟಾ, ಸುಪ್ರೀತಾ ಸೇರಿದಂತೆ ಓಡಿಪಿ ಸಂಸ್ಥೆಯ ಪ್ರಮುಖರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.