ಮಡಿಕೇರಿ ಸೆ.25 NEWS DESK : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ತನ್ನ ನಿಲುವು ಪ್ರಕಟಿಸಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಮುಖರು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು. ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುವ ಬಿಜೆಪಿಯವರು ಮೊದಲು, ನೈತಿಕತೆ ಎನ್ನುವುದು ಮೋದಿ ಮತ್ತು ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕವಾಗಿದೆಯೇ ಎಂದು ಉತ್ತರಿಸಬೇಕು. ಗುಜರಾತ್‍ನಲ್ಲಿ 2002 ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2008 ರಲ್ಲಿ ಸರ್ವೋಚ್ಚ ನ್ಯಾಯಾಲಯ ತನಿಖೆಗೆ ಸೂಚನೆ ನೀಡಿದ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೇನು ನೀಡಿರಲಿಲ್ಲವೆಂದು ಆರೋಪಿಸಿದರು. ಇದೀಗ ಮುಡಾ ಹಗರಣದಲ್ಲಿ ಬಿಜೆಪಿಯವರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದರಲ್ಲಿ ಏನು ಅರ್ಥವಿದೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವಿಲ್ಲ ಎನ್ನುವುದು ಜಿಲ್ಲಾ ಕಾಂಗ್ರೆಸ್‍ನ ನಿಲುವಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ಭಾವಿಸಿದರೆ ಅದು ತಿರುಕನ ಕನಸಾಗಲಿದೆ ಎಂದು ಮೈನಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ದೇವಯ್ಯ, ನಗರಸಭಾ ಸದಸ್ಯ ಮಂಡೀರ ಸದಾ ಮುದ್ದಪ್ಪ, ಮುಡಾ ಸದಸ್ಯ ಕಾನೆಹಿತ್ಲು ಮೊಣ್ಣಪ್ಪ, ವಿರಾಜಪೇಟೆ ಕ್ಷೇತ್ರದ ಪಕ್ಷದ ವಕ್ತಾರ ಪಿ.ಎಲ್.ಸುರೇಶ್ ಹಾಗೂ ಗ್ಯಾರಂಟಿ ಅನುಷ್ಟಾನ ಸಮಿತಿಯ ಕೋಚನ ಹರಿ ಪ್ರಸಾದ್ ಉಪಸ್ಥಿತರಿದ್ದರು.