ಮಡಿಕೇರಿ ಸೆ.25 NEWS DESK : ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24 ನೇ ಸಾಲಿನಲ್ಲಿ ರೂ.25.02 ಲಕ್ಷ ಲಾಭ ಗಳಿಸಿದೆ ಮತ್ತು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ “ಎ” ಶ್ರೇಣಿ ಪಡೆದಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ಆಗೋಳಿಕಜೆ ಅವರು ತಿಳಿಸಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನೇಕ ಸಹಕಾರಿಗಳ ಪರಿಶ್ರಮದಿಂದ ಮದೆ ಸಹಕಾರ ಸಂಘ ರಚನೆಗೊಂಡಿದೆ ಎಂದು ಸ್ಮರಿಸಿಕೊಂಡರು. ಕಳೆದ ವರ್ಷ ಸದಸ್ಯರ ಖಾತೆಗಳಿಗೆ ಪ್ರಿಂಟೆಡ್ ಪಾಸ್ ಪುಸ್ತಕ ನೀಡಲಾಗಿದೆ. ಇ- ಸ್ಟ್ಯಾಂಪ್ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಘದ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಬ್ಯಾಂಕಿಂಗ್ ವಿಭಾಗಕ್ಕೆ ನೂತನ ಕೌಂಟರ್, ಸಂಘದ ಸುತ್ತ ಕಾಂಪೌಂಡ್ ನಿರ್ಮಾಣ, ಬೋರ್ ವೆಲ್ ಕೊರೆಯಿಸಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಘದ ಸಭಾಂಗಣವನ್ನು ದುರಸ್ತಿಗೊಳಿಸಿ ಹೊಸ ವಿನ್ಯಾಸದೊಂದಿಗೆ ಸುಸಜ್ಜಿತಗೊಳಿಸಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಸಾಲದ ಬಡ್ಡಿಯನ್ನು ಕಡಿಮೆ ಮಾಡಲಾಗಿದೆ. ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ. ವ್ಯಾಪಾರ ವಿಭಾಗದಲ್ಲಿ ವ್ಯವಹಾರದ ನಿಟ್ಟಿನಲ್ಲಿ ಕಾರ್ಯಯೋಜನೆ, ಯೋಧ ವಂದನಾ ಕಾರ್ಯಕ್ರಮವನ್ನು ಆಯೋಜಿಸಿ 160 ಜನ ಸೈನಿಕರಿಗೆ ಗೌರವಾರ್ಪಣೆ ಮಾಡಲಾಗಿದೆ. ಇದು ಸಂಘದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿದೆ. ಸಂಘದ ವತಿಯಿಂದ ಕ್ಯಾಲೆಂಡರ್ ವಿತರಣೆ, ವಾಟ್ಸಾಪ್ ಗ್ರೂಪ್ ಗಳ ಮೂಲಕ ಮಾಹಿತಿ, ಅಧ್ಯಕ್ಷರ ಕೊಠಡಿ ನಿರ್ಮಾಣ, ದಾಖಲಾತಿಗಳ ಸಂರಕ್ಷಣೆಗಾಗಿ ಆದ್ಯತೆ ನೀಡಲಾಗಿದೆ. ಸಂಘದ ಕಚೇರಿ ಎದುರಿನ ಮೇಲ್ಚಾವಣಿ ದುರಸ್ತಿ ಹಾಗೂ ಜನರೇಟರ್ ಇರಿಸಲು ಕೋಣೆ ನಿರ್ಮಾಣ ಮಾಡಲಾಗಿದೆ ಎಂದು ಧನಂಜಯ ಆಗೋಳಿಕಜೆ ವಿವರಿಸಿದರು. ಸಹಕಾರ ಸಂಘ ಉತ್ತಮ ರೀತಿಯಲ್ಲಿ ಮುನ್ನಡೆಯಬೇಕಾದರೆ ಸದಸ್ಯರೆಲ್ಲರ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಂಘದಲ್ಲಿ ವ್ಯವಹಾರವನ್ನು ಮಾಡಬೇಕು. ಇಂದಿನ ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆದಿದೆ ಎಂದರು. ಸದಸ್ಯರು ಸಂಘದ ಅಭ್ಯುದಯದ ಕುರಿತು ಅಭಿಪ್ರಾಯ ಹಂಚಿಕೊಂಡರು. ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಸಜನ್ ಬಿ.ಸಿ, ನಿರ್ದೇಶಕರಾದ ಕಿಮ್ಮುಡಿರ ಎ.ಜಗದೀಶ್, ಮುಧ್ಯನ ಬಿ.ಚಂದ್ರಶೇಖರ್, ಕೊಲ್ಯದ ಆರ್.ಗಿರೀಶ್, ಯೋಗೇಶ್ ಬಿ.ಎಸ್, ರಾಜು ಕೆ.ಆರ್, ಸೀನಾ ಪಿ.ಬಿ, ಬೋಮ್ಮುಡಿರ ಕೆ.ನಾಗವೇಣಿ, ಮುಧ್ಯನ ಎಲ್.ಸುಜ್ಯೋತಿ, ಮುಕ್ಕಾಟಿ ಎ.ಸವಿತ, ಹುದೇರಿ ಎ.ಅರುಣ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಪೊನ್ನಪ್ಪ ಎನ್.ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗೀರಥಿ ಹೆಚ್.ಜಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.