ವಿರಾಜಪೇಟೆ ಸೆ.25 NEWS DESK : ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಎನ್ ಎಸ್ ಎಸ್ ದಿವಸದ ಪ್ರಯುಕ್ತ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಸ್ವಚ್ಛತಾ ಹೈ ಸೇವಾ ಎಂಬ ದ್ಯೇಯ ವಾಕ್ಯದಡಿಯಲ್ಲಿ ಶ್ರಮದಾನ ಮಾಡಿದರು. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜದ ಒಳಿತು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದ್ದು, ವಿದ್ಯಾರ್ಥಿಗಳು ಸಮಾಜದ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸಬೇಕು ಎಂದರು. ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಶಸ್ತ್ರ ಚಿಕಿತ್ಸಕರಾದ ಡಾ.ವಿಶ್ವನಾಥ್ ಸಿಂಪಿ ಮಾತನಾಡಿ, ಸ್ವಚ್ಛತಾ ಅಭಿಯಾನವು ಎನ್.ಎಸ್.ಎಸ್. ದ್ಯೇಯವಾಗಿದ್ದು ವಿದ್ಯಾರ್ಥಿಗಳು ತಮ್ಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ. ಸೇವಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದರು. ಸಾಮಾಜಿಕ ಕಳಕಳಿಯಲ್ಲಿ ಎನ್ ಎಸ್ ಎಸ್ ನ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಸಾರ್ವಜನಿಕ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮಹೇಶ್, ಕಚೇರಿ ಸಿಬ್ಬಂದಿಗಳಾದ ಇಂದುಲೇಖ, ಹಿರಿಯ ಶುಶ್ರೂಷಕಿ ಸುಲೋಚನಾ, ಉಪನ್ಯಾಸಕರಾದ ಅರ್ಜುನ್, ವಿಲೀನ, ಶಶಿಕಲಾ, ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಎನ್.ಎಸ್.ಎಸ್. ಅಧಿಕಾರಿ ಹಾಗೂ ಉಪನ್ಯಾಸಕರಾದ ಶಾಂತಿಭೂಷಣ್ ಸ್ವಾಗತಿಸಿ, ನಿರೂಪಿಸಿದರು. ಎನ್.ಎಸ್.ಎಸ್.ವಿದ್ಯಾರ್ಥಿಗಳು ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು, ಪ್ಲಾಸ್ಟಿಕ್, ಪೇಪರ್ ಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೇ ಆಸ್ಪತ್ರೆಯ ಮುಂಭಾಗದ ಹೂದೋಟದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.