ವಿರಾಜಪೇಟೆ ಸೆ.23 NEWS DESK : ಕೊಡವರು ಮುಂದೆ ಬಂದರೆ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಕೊಡಗಿನ ಹಬ್ಬ ಹರಿದಿನಗಳನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು ಎಂದು ಕುಪ್ಪಂಡ ಛಾಯಾ ನಂಜಪ್ಪ ಹೇಳಿದರು. ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ಕೈಲ್‍ಪೊಳ್ದ್ ಹಬ್ಬದ ಪ್ರಯುಕ್ತ ನಡೆದ ಒತ್ತೊರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೊಡವರು ತಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು. ಕೊಡವಾಮೆ ಬಗ್ಗೆ, ಕೊಡವ ಜನಾಂಗದ ಬಗ್ಗೆ, ಸಂಸ್ಕೃತಿ, ಆಚಾರ, ವಿಚಾರ ಪದ್ಧತಿ ಪರಂಪರೆ ಉಳಿಸಿ ಬೇಳೆಸಬೇಕು, ಕೊಡವರು ಸ್ವಾಭಿಮಾನಿಗಳು ಹಾಗೂ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕೊಡವತನವನ್ನು ಮರೆಯಬಾರದು ಎಂದರಲ್ಲದೆ ತಾವು ಉದ್ಯಮದಲ್ಲಿ ಹೇಗೆ ಸತತವಾದ ಪ್ರಯತ್ನದಿಂದ ಮುಂದೆ ಬರಲು ಸಾಧ್ಯವಾಯಿತು ಎನ್ನುವುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನ ಸಂಭ್ರಮದ ಕೈಲ್ ಮುಹೂರ್ತ ಹಬ್ಬ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದೆ. ನಮ್ಮ ಜೀವನ ಕ್ರಮ, ಬೇಟೆಯಾಡುವುದು ಹಾಗೂ ಗೆಡ್ಡೆ, ಗೆಣಸುಗಳನ್ನು ಕಾಡಿನಲ್ಲಿ ಸಂಗ್ರಹಿಸುವುದು. ಭತ್ತದ ಕೃಷಿ ಮಾಡುವುದು ಜೀವನ ಪದ್ಧತಿಯಾಗಿ ಬೆಳೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ಪ್ರಭಾವ ನಮ್ಮ ಸಂಪ್ರದಾಯಗಳ ಮೇಲೆ ಬೀರಿ ಅಂದಿನ ಸಂಭ್ರಮ ಇಂದು ಕೇವಲ ಸಾಂಕೇತಿಕತೆಗೆ ಸೀಮಿತವಾಗಿದೆ ಎಂದರು. ಕೈಲ್ ಮುಹೂರ್ತದ ಒಂದು ಭಾಗವಾಗಿ ಊರಿನ ಎಲ್ಲರು ಒಂದೆಡೆ ‘ಮಂದ್’ ನಲ್ಲಿ ಸೇರುವುದು. ಅಲ್ಲಿ, ಅನೇಕ ಆಟೋಟ ಸ್ಪರ್ಧೆಗಳಲ್ಲಿ ಹೆಂಗಸರು, ಗಂಡಸರು, ಮಕ್ಕಳು ಪಾಲ್ಗೊಳ್ಳುವುದು ಈಗಲೂ ವಿರಳವಾಗಿಯಾದರು ಕಾಣಬಹುದಾಗಿದೆ ಎಂದ ಅವರು, ಪೊಮ್ಮಕ್ಕಡ ಒಕ್ಕೂಟ ನಡೆದು ಬಂದ ಹಾದಿ ಹಾಗೂ ಒಕ್ಕೂಟದ ಉದ್ದೇಶವನ್ನು ಸವಿವರವಾಗಿ ತಿಳಿಸಿದರು. ಕೊಡವ ಆಚಾರ ವಿಚಾರ, ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯ. ಹಾಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠವನ್ನು ಮನೆಯಲ್ಲಿ ಕಲಿಸಿ ಕೊಡಬೇಕು ಎಂದು ಕಿವಿಮಾತನ್ನು ಹೇಳಿದರು. ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಅತಿಥಿ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಮಾಳೇಟಿರ ಸ್ವಾತಿ ಅವರ ಮುಂದಾಳತ್ವದಲ್ಲಿ ಬೋಜಕ್ಕ ಗ್ರೂಪ್ ಸದಸ್ಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾ ಪೈಪೋಟಿಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯ ಮಹಿಳೆಯರಿಗೆ ಹಲವು ತರಹದ ಕ್ರೀಡಾ ಪೈಪೋಟಿ, ಕೊಡವ ವಾಲಗತಾಟ್ ಪೈಪೋಟಿ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ, ನಾಯಕಂಡ ಬೇಬಿ ಚಿಣ್ಣಪ್ಪ, ಖಜಾಂಚಿ ತಾತಂಡ ಯಶು ಕಬೀರ್, ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ, ಬೋಜಕ್ಕ ಗ್ರೂಪಿನ ನಾಯಕಿ ಸ್ವಾತಿ ಮೋಹನ್ ಉಪಸ್ಥಿತರಿದ್ದರು. ಐನಂಡ ಜಮುನಾ ಅವರು ಅತಿಥಿಗಳಾದ ಕುಪ್ಪಂಡ ಛಾಯಾ ನಂಜಪ್ಪ ಅವರ ವ್ಯಕ್ತಿ ಪರಿಚಯ ಮಾಡಿದರು. ಚೆಂದಂಡ ಮೀನಾ ಪ್ರಾರ್ಥಿಸಿದರು. ಒಕ್ಕೂಟದ ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ ವಂದಿಸಿದರು.