ಸುಂಟಿಕೊಪ್ಪ ಸೆ.26 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಕುರಿತು ಮಾಹಿತಿ ನೀಡಲಾಯಿತು. ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‍ಐ ಸೈಮನ್ ಡಿಕುನ್ನ, ದುಶ್ಚಟಗಳಿಂದ ಮಕ್ಕಳ ಆರೋಗ್ಯದ ಮೇಲೆ ಬೀರುವ ದುಷ್ಪಾರಿಣಾಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ತಾಲ್ಲೂಕು ಜ್ಞಾನವಿಕಾಸ ಅಧಿಕಾರಿ ಮಾಲಿನಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಲ ವಿತರಿಸುವುದು ವಸೂಲಾತಿ ಮಾಡುವುದಕ್ಕೆ ಮಾತ್ರ ಸಂಘವು ಸಿಮೀತಗೊಳ್ಳದೆ ವ್ಯಕ್ತಿಗಳ ವೈಯಕ್ತಿಕ ಅಭಿವೃದ್ಧಿಗೆ ಬೇಕಾದ ತರಬೇತಿಗಳನ್ನು ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳ ಜೀವನವು ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮಾಜದ ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯ ಬಾಲಕೃಷ್ಣ ಮಾತನಾಡಿ, ಇಂದಿನ ವೈಜ್ಞಾನಿಕತೆಯು ಬೆಳವಣಿಗೆಗೊಂಡಿದ್ದು, ಮಕ್ಕಳ ಸ್ವಾಸ್ಥ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಜ್ಞಾನರ್ಜನೆಯ ಕಡೆಗೆ ಗಮನಹರಿಸಬೇಕು. ಪೋಷಕರಿಗೆ ಮತ್ತು ದೇಶಕ್ಕೆ ಉತ್ತಮ ಪ್ರಜೆಗಳಾಗಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಕರೆ ನೀಡಿದರು. ಇದೇ ಸಂದರ್ಭ ಸ್ವಾಸ್ಥ್ಯ ಸಂಕಲ್ಪದ ಅಂಗವಾಗಿ ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಚಿತ್ರಾ ಸುರೇಶ್, ಯಶೋಧ ಮತ್ತಿತರರು ಇದ್ದರು.