ಸುಂಟಿಕೊಪ್ಪ ಸೆ.28 NEWS DESK : ವಿದ್ಯಾರ್ಥಿಗಳು ತಾವು ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ವಿದ್ಯೆ ಕಲಿಸಿದ ಗುರುಗಳನ್ನು ಗೌರವದಿಂದ ಕಾಣಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಕರೆ ನೀಡಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಪಡೆಯಲು ಕಾರಣಕರ್ತರಾದ ಉಪನ್ಯಾಸಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಪ್ರಾಸ್ತಾವಿಕವಾಗಿ ಮತನಾಡಿದ ಅವರು, ಕಳೆದ 35 ವರ್ಷಗಳಿಂದ ಸಂಘಟನೆಯು ವಾರ್ಷಿಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಶಿಕ್ಷಣ ಸಂಘಟನೆ ಮತ್ತು ಹೋರಾಟದಲ್ಲಿ ನಾವು ಜಯಕಾಣಬೇಕಾದರೆ ಉತ್ತಮ ಶಿಕ್ಷಣ ಅಗತ್ಯ. ಸಂಘಟನೆಯು ಪರಿಶೀಷ್ಟ ಜಾತಿ ಪರಿಶೀಷ್ಟ ವರ್ಗದ ವಿರುದ್ದ ನಡೆಯುವ ಯಾವುದೇ ದೌರ್ಜನ್ಯಗಳನ್ನು ಕಾನೂನಿನ ಮೂಲಕ ಎದುರಿಸುತ್ತಿದೆ. ಹಾಡಿಗಳಲ್ಲಿ ಮಕ್ಕಳ ಶಿಕ್ಷಣ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುತ್ತ ಬರುತ್ತಿದೆ. ವೃದ್ಧಾಶ್ರಮಗಳಲ್ಲಿ ಹಿರಿಯರಿಗೆ ಬಟ್ಟೆ ವಿತರಣೆ, ಮಳೆಗಾಲದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಪಾದರಕ್ಷೆ ಹಾಗೂ ಸ್ವೆಟರ್ ವಿತರಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟನೆಯ ಮೂಲಕ ಮಾಡುತ್ತ ಬರುತ್ತಿದ್ದೇವೆ ಎಂದು ದಿವಾಕರ್ ಹೇಳಿದರು. ಸಮಾರಂಭವನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‍ಐ ಸುರೇಶ್ ಉದ್ಘಾಟಿಸಿ ಮಾತನಾಡಿದ ಮಕ್ಕಳು ಅತೀಯಾದ ಮೊಬೈಲ್ ಬಳಕೆಯಿಂದ ದೂರವಿರಿ, ಮಾದಕ ವಸ್ತು ಸೇರಿದಂತೆ ದುಶ್ಚಟಗಳಿಗೆ ಬಲಿಯಾಗದೆ. ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಶಿಕ್ಷಣ ಸಾಧನೆ ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕೆಂದು ಕರೆ ನೀಡಿದರು. ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ್ದು ಮಾತ್ರವಲ್ಲದೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಪರಿಕಲ್ಪನೆಯನ್ನು ಜಾರಿಗೆ ಬರುವಂತೆ ಮಾಡಿದ ಮಹನೀಯರು. ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೌರವಿಸುವುದು ಅವರಿಗೆ ನೀಡುವ ಪ್ರೋತ್ಸಾಹ ಮತ್ತು ಉತ್ತೇಜನ ಎಂದು ಹೇಳಿದ ಅವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಂಗ್ಲೀಷ್ ಮಾದ್ಯಮದಲ್ಲಿ ಓದಿದ ಮಕ್ಕಳಿಂಗಿತ ಹೆಚ್ಚು ಸಾಧನೆ ಮಾಡಿದ್ದಾರೆ. ಈ ಪರಂಪರೆಯನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗಬೇಕೆಂದು ಕಿವಿ ಮಾತು ಹೇಳಿದರು. ಗ್ರಾ.ಪಂ.ಸದಸ್ಯ ರಫೀಕ್‍ಖಾನ್ ಮಾತನಾಡಿ, ಸಮಾಜದ ವಾತವಾರಣ ತಿಳಿಯಾಗಿರಬೆಕಾದರೆ ಶಿಕ್ಷಣ ಅಗತ್ಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಸಾಧನೆ ಮಾಡಿದ 6 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕಲಾ ವಿಭಾಗದಲ್ಲಿ ಶ್ವೇತ ಮತ್ತು ತುಳಸಿ, ವಿಜ್ಞಾನ ವಿಭಾಗದಲ್ಲಿ ಸಫ್ರಾನಾ ಕೆ.ಎಂ., ಯಶಸ್ವಿನಿ, ವಾಣಿಜ್ಯ ವಿಭಾಗದಲ್ಲಿ ಕವಿತ, ಸನೂಷ ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಶಬ್ಬೀರ್, ಸೋಮನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಹಿರಿಯ ಸಲಹೆಗಾರ ಈರಪ್ಪ, ದುರ್ಗಯ್ಯ, ಉಪನ್ಯಾಸಕರುಗಳಾದ ಈಶ, ಸುನೀತ ಗಿರೀಶ್, ಕೆ.ಸಿ.ಕವಿತ, ಕವಿತಭಕ್ತ್, ಸಂದ್ಯಾ, ಅನುಷಾ, ಕನಕ, ಸೀಮ, ಅಭಿಷೇಕ್ ಮತ್ತಿತರರು ಹಾಜರಿದ್ದರು.