ಮಡಿಕೇರಿ NEWS DESK ಸೆ.29 : ಕೋಟ್ಯಾಂತರ ಭಕ್ತರ ಧಾರ್ಮಿಕ ನಂಬಿಕೆಯ ಕ್ಷೇತ್ರವಾಗಿರುವ ತಿರುಪತಿಯ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘದ ಕೊಡಗು ಶಾಖೆ ಒತ್ತಾಯಿಸಿದೆ. ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಹಾಸಂಘದ ಪ್ರಮುಖರು ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಇದು ಹಿಂದೂಗಳನ್ನು ಧರ್ಮಭ್ರಷ್ಟರನ್ನಾಗಿ ಮಾಡುವ ಷಡ್ಯಂತ್ರ ಮತ್ತು ಹಿಂದೂಗಳ ಧರ್ಮಶ್ರದ್ಧೆಯ ಮೇಲಿನ ದಾಳಿಯಾಗಿದೆ. ಇದೊಂದು ಗಂಭೀರ ವಿಚಾರವಾಗಿದ್ದು, ಈ ಹಿಂದಿನ ಸರ್ಕಾರಗಳು ತಿರುಪತಿಯಲ್ಲಿ ಜಾರಿಗೆ ತಂದ ಹಿಂದೂ ವಿರೋಧಿ ನಿರ್ಧಾರಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ಹಿಂದೂಗಳ ಧಾರ್ಮಿಕ ಭಾವನೆಗೆ ವಿರುದ್ಧವಾಗಿ ಲಡ್ಡು ಪ್ರಸಾದದಲ್ಲಿ ಕೊಬ್ಬು ಬೆರೆಸಲು ಕಾರಣಕರ್ತರಾದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಈಗಿನ ಆಂಧ್ರ ಸರ್ಕಾರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಹಿಂದಿನ ಸರ್ಕಾರ ರೂಪಿಸಿರುವ ಹಿಂದೂ ವಿರೋಧಿ ನೀತಿಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘದ ರಾಜ್ಯ ಸಂಯೋಜಕ ಪವನ್ ಬಿದ್ದಪ್ಪ ಒತ್ತಾಯಿಸಿದರು. ಇದೇ ಸಂದರ್ಭ ಮಹಾಸಂಘದ ಪ್ರಮುಖರು ಕುಶಾಲನಗರದ ತಹಶೀಲ್ದಾರ್, ಗೋಣಿಕೊಪ್ಪ ಮತ್ತು ವಿರಾಜಪೇಟೆಯ ಶಿರಸ್ತೆದಾರ್ ಮೂಲಕ ಆಂಧ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಮಹಾಸಂಘದ ಯಶ್ವಂತ್, ಪ್ರಕಾಶ್, ಅಶೋಕ್ ರಾವಲ್, ನಳಿನಿ, ಗಾಯತ್ರಿ, ಮಹೇಂದ್ರ ಶರ್ಮಾ, ಮಂಜುನಾಥ್, ಸೋಮಶೇಖರ್, ಭವರಲಾಲ್, ರವಿಕುಮಾರ್, ರಾಘವೇಂದ್ರ, ಸೋಮಣ್ಣ, ಹೇಮಾ ಶ್ರೀಮುತ್ತಪ್ಪ ದೇವಸ್ಥಾನದ ಪವನ್ ಬಿದ್ದಪ್ಪ, ಬಲಮುರಿ ಗಣಪತಿ ದೇವಸ್ಥಾನದ ರೇಣು ಕುಮಾರ್, ಕೋಟೆ ಮಾರಿಯಮ್ಮ ದೇವಸ್ಥಾನದ ಸೋಮಯ್ಯ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಉಪಸ್ಥಿತರಿದ್ದರು.