ಮಡಿಕೇರಿ NEWS DESK ಸೆ.29 : ಕೊಡಗು ಜಿಲ್ಲೆಯಾಧ್ಯಂತ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ /ಆಸ್ಪತ್ರೆಗಳಲ್ಲಿ ಎಂ.ಆರ್. ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದಿರುವುದರಿಂದ ರೋಗಿಗಳು ಸ್ಕಾನಿಂಗ್ ಗಾಗಿ ಇತರೇ ದೂರದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಬೆಂಗಳೂರು ನಗರಗಳನ್ನು ಅವಲಂಬಿಸಲಾಗುತ್ತಿತ್ತು. ಪ್ರಸ್ತುತ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿಯೇ ಅತ್ಯಾಧುನಿಕ ಎಂ.ಆರ್.ಐ ಸ್ಕ್ಯಾನಿಂಗ್ ಉಪಕರಣವನ್ನು ಸರ್ಕಾರದ ವತಿಯಿಂದ ಅಳವಡಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಲ್ಲಿಯೇ ಅಗತ್ಯ ಸ್ಕ್ಯಾನಿಂಗ್ ಗಳನ್ನು ಮಾಡಬಹುದು. ಪರೀಕ್ಷಾ ವರದಿಗಳನ್ನು ಅನುಸರಿಸಿ ಅಗತ್ಯ ಹೆಚ್ಚಿನ ಚಿಕಿತ್ಸೆಗಳನ್ನು ಇಲ್ಲಿಯೇ ಒದಗಿಸಬಹುದಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಹಣದ ವ್ಯಯ ತಪ್ಪಿಸಿದಂತಾಗಿದೆ. ರೇಡಿಯಾಲಜಿ ವಿಭಾಗದಲ್ಲಿನ ವರದಿಗಳನ್ನು ಮಾಡಲು ತಜ್ಞವೈದ್ಯರುಗಳ ಕೊರತೆಯ ಹಿನ್ನೆಲೆಯಲ್ಲಿ ಟೆಲಿ-ರೇಡಿಯಾಲಜಿ ವಿಧಾನದ ಮೂಲಕ ವರದಿಗಳನ್ನು ಒದಗಿಸುವ ಟೆಂಡರ್ ಪ್ರಕ್ರಿಯೆ ಮಾಡಲಾಗಿದೆ. ಸಧ್ಯದಲ್ಲಿಯೇ ಸಂಪೂರ್ಣ ಎಲ್ಲಾ ರೀತಿಯ ವರದಿಗಳನ್ನು ಇಲ್ಲಿಯೇ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯ ದೊರೆಯಲು ಸ್ವತ: ವೈದ್ಯರೂ ಆಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಶ್ರಮವೇ ಕಾರಣವಾಗಿದೆ.