ಮಡಿಕೇರಿ NEWS DESK ಸೆ.29 : ಕೊಡಗಿನ ಜನರ ಹಲವು ವರ್ಷಗಳ ಬೇಡಿಕೆಯಾದ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಇದೀಗ ಜಿಲ್ಲಾಸ್ಪತ್ರೆಗೆ ದೊರೆತ್ತಿದ್ದು, ಇದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೇ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸ್ವತ: ವೈದ್ಯರೂ ಆಗಿರುವ ಡಾ.ಮಂತರ್ ಗೌಡ ಅವರು ಕೆಲವೇ ದಿನಗಳಲ್ಲಿ ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯವನ್ನು ತ್ವರಿತವಾಗಿ ಸರ್ಕಾರದಿಂದ ಮಂಜೂರು ಮಾಡಿಸಿರುವುದು ಹೆಮ್ಮೆಯ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು, ಕಡು ಬಡವರು, ಪರಿಶಿಷ್ಟರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರೋಗ್ಯ ಸಂಬಂಧಿತ ಚಿಕಿತ್ಸೆಗಾಗಿ ದೂರದ ಮಂಗಳೂರು, ಮೈಸೂರು, ಬೆಂಗಳೂರನ್ನೇ ಅವಲಂಬಿಸಬೇಕಾಗಿತ್ತು. ಆದರೆ ಇದೀಗ ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲೇ ಲಭ್ಯವಿರುವುದರಿಂದ ಎಲ್ಲಾ ವರ್ಗದ ಜನ ನಿಟ್ಟುಸಿರು ಬಿಡುವಂತ್ತಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಈ ಸೌಲಭ್ಯ ಸಹಕಾರಿಯಾಗಿದ್ದು, ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆ.ಎಲ್.ಜನಾರ್ಧನ್ ಮನವಿ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಸೌಲಭ್ಯಗಳೊಂದಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿರುವುದರಿಂದ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯ ರೋಗಿಗಳು ಆಗಮಿಸುತ್ತಿದ್ದಾರೆ. ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಎಲ್ಲರಿಗೂ ಅನುಕೂಲ ಕಲ್ಪಿಸಲಿದ್ದು, ಇದನ್ನು ಒದಗಿಸಲು ಶ್ರಮಿಸಿದ ಶಾಸಕ ಡಾ.ಮಂತರ್ ಗೌಡ ಅವರು ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ.