ಮಡಿಕೇರಿ NEWS DESK ಸೆ.29 : ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಕೊಡಗಿನ ಜನತೆಗೆ ವರದಾನವಾಗಿದೆ. ಕಳೆದ 25 ವರ್ಷಗಳಿಂದ ಈಡೇರದೆ ಇದ್ದ ಜನರ ದೊಡ್ಡ ಬೇಡಿಕೆ ಕೇವಲ ಒಂದೂವರೆ ವರ್ಷದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಂದ ಈಡೇರಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಬಡವರಿಗೆ ಹೆಚ್ಚು ಅನುಕೂಲವಾಗಿದೆ. ಶಾಸಕ ಡಾ.ಮಂತರ್ ಗೌಡ ಅವರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯನ್ನು ಅರಿತು ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಬಡ ರೋಗಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದೆ ರೋಗಿಗಳು ದೂರದ ಬೆಂಗಳೂರು, ಮಂಗಳೂರು ಆಸ್ಪತ್ರೆಗಳಿಗೆ ತೆರಳಿ ಜೀವ ಉಳಿಸಿಕೊಳ್ಳಬೇಕಾಗಿತ್ತು. ಆದರೆ ಇದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಅಸಾಧ್ಯವಾಗಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲೇ ಈ ಸೌಲಭ್ಯ ಲಭ್ಯವಿರುವುದರಿಂದ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಸೇವೆ ಸಿಗುವಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಇದು ಸ್ವತ: ವೈದ್ಯರೂ ಆಗಿರುವ ಡಾ.ಮಂತರ್ ಗೌಡ ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಒಬ್ಬರು ಶಾಸಕರು ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು, ಬಡವರ ಬೇಡಿಕೆಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ಜಿಲ್ಲೆಯ ಇಬ್ಬರು ಶಾಸಕರು ತೋರಿಸಿಕೊಟ್ಟಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅಭಿವೃದ್ಧಿ ಕಾರ್ಯಗಳು ಕೂಡ ಇತರರಿಗೆ ಮಾದರಿಯಾಗಿದೆ. ಬೃಹತ್ ಕಟ್ಟಡಗಳನ್ನಷ್ಟೇ ಹೊಂದಿದ್ದ ಜಿಲ್ಲಾಸ್ಪತ್ರೆ ಎಂಆರ್ ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದೆ ನಿಷ್ಪ್ರಯೋಜಕ ಎನ್ನುವ ಟೀಕಿಗೆ ಗುರಿಯಾಗಿತ್ತು. ಆದರೆ ಇದೀಗ ಮಡಿಕೇರಿ ಶಾಸಕರು ಈ ಅಪವಾದವನ್ನು ದೂರ ಮಾಡಿದ್ದು, ಇನ್ನು ಮುಂದೆಯೂ ಉತ್ತಮ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಶಾಸಕರಾಗಿ ಕೇವಲ ಒಂದೂವರೆ ವರ್ಷದಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಸೌಲಭ್ಯವನ್ನು ಒದಗಿಸಿಕೊಟ್ಟ ಡಾ.ಮಂತರ್ ಗೌಡ ಅವರು ಜಿಲ್ಲೆಯ ಜನರ ಕೃತಜ್ಞತೆಗೆ ಪಾತ್ರರಾಗಿದ್ದಾರೆ ಎಂದು ಎಂ.ಎ.ಕಲೀಲ್ ಬಾಷ ತಿಳಿಸಿದ್ದಾರೆ.