ಕುಶಾಲನಗರ ಸೆ.30 NEWS DESK : ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಸಮನ್ವಯತೆಯಿಂದ ಸೇವಾ ಕಾರ್ಯ ನಿರ್ವಹಿಸುವ ಮೂಲಕ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾಡುವುದರೊಂದಿಗೆ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಮೈಸೂರು ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲರೂ ಹಾಗೂ ಜಂಟಿ ನಿರ್ದೇಶಕರೂ ಆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಗೀತಾಂಭ ಹೇಳಿದರು. ಕೊಡಗು ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಕುಶಾಲನಗರ ಪಟ್ಟಣದ ಫಾತಿಮ ಕಾನ್ವೆಂಟ್ ಶಾಲೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ನಡೆದಶೈಕ್ಷಣಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ಕಾರಣರಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರೌಢಶಾಲಾ ಶಿಕ್ಷಕರು ಹಾಗೂ ಶಿಕ್ಷಕರ ಪರಿಶ್ರಮ ಕಾರಣವಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೂಡ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಲು ಶ್ರಮಿಸಬೇಕು ಎಂದರು. ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು ನಾಲ್ಕನೇ ಸ್ಥಾನ ಗಳಿಸಲು ಶ್ರಮಿಸಿದವರನ್ನು ಡಿಡಿಪಿಐ ಸಿ.ರಂಗಧಾಮಪ್ಪ ಶ್ಲಾಘಿಸಿದರು. ಸೋಮವಾರಪೇಟೆ ಬಿಇಓ ಎಸ್.ಭಾಗ್ಯಮ್ಮ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಈಗಿನಿಂದಲೇ ವಿವಿಧ ಯೋಜನಾ ಕ್ರಮಗಳನ್ನು ಕೈಗೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸಬೇಕು ಎಂದರು.
ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಮಹಾದೇವಸ್ವಾಮಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು ಕೈಗೊಂಡಿರುವ ನೂತನ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಕ್ಷರ ದಾಸೋಹ ಯೋಜನೆಯ ಕುರಿತು ಮಾಹಿತಿ ನೀಡಿದ ತಾಲ್ಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಚ್.ಕಾಳನಾಯಕ್ , ಸರ್ಕಾರದ ಯೋಜನೆಯಂತೆ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಾರದಲ್ಲಿ ಹೆಚ್ಚುವರಿಯಾಗಿ ನಾಲ್ಕು ದಿನಗಳ ಕಾಲ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಮೊಟ್ಟೆಯನ್ನು ಉಚಿತವಾಗಿ ವಿತರಣೆ ಮಾಡುತ್ತಿರುವ ಕುರಿತು ಮಾಹಿತಿ ನೀಡಿದರು. ಮೈಸೂರು ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಉಪನ್ಯಾಸಕರಾದ ಗಾಯಿತ್ರಿ ಹಾಗೂ ರುಕ್ಸಾನ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಸಲಹೆ ನೀಡಿದರು. ಶೈಕ್ಷಣಿಕ ಸಮಾಲೋಚನಾ ಸಭೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.