ಮಡಿಕೇರಿ ಅ.1 NEWS DESK : ನಗರದ ಕೊಡಗು ವಿದ್ಯಾಲಯ ವಿದ್ಯಾಸಂಸ್ಥೆಯ ವತಿಯಿಂದ ದ್ವಿತೀಯ ಬಾರಿಗೆ ಅ.4 ರಿಂದ 7 ರವರೆಗೆ ಸಿಬಿಎಸ್‍ಇ ದಕ್ಷಿಣ ವಲಯದ ವಲಯ 2ರ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ವಲಯಕ್ಕೆ ಒಳಪಡುವ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಸಿಬಿಎಸ್‍ಇ ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳಿಗೆ ಸೀಮಿತವಾಗಿ ಆಯೋಜಿತ ಹಾಕಿ ಪಂದ್ಯಾವಳಿಯ ಪಂದ್ಯಗಳು ಕೂಡಿಗೆ ಮತ್ತು ಸೋಮವಾರಪೇಟೆಯ ಆಸ್ಟ್ರೋ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದರು. 14 ವರ್ಷದೊಳಗಿನ, 17 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ಮೂರು ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿದ್ದು, ಒಟ್ಟು 37 ತಂಡಗಳು ಪಾಲ್ಗೊಳ್ಳಲಿವೆ. ಕ್ರೀಡಾಪಟುಗಳು, ತರಬೇತುದಾರರು ಮತ್ತು ವ್ಯವಸ್ಥಾಪಕರು ಸೇರಿದಂತೆ ಸುಮಾರು 700 ಮಂದಿ ಭಾಗವಹಿಸಲಿದ್ದಾರೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ 60 ಪಂದ್ಯಾಟಗಳು ನಡೆಯಲಿದ್ದು, ಹಾಕಿ ಕೂರ್ಗ್‍ನ ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರರು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಹಾಗೂ ತಂಡದ ಸಿಬ್ಬಂದಿಗಳಿಗೆ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೂಡಿಗೆ ಮತ್ತು ಸೋಮವಾರಪೇಟೆಯಲ್ಲಿ ನಡೆಯುವ ಪಂದ್ಯಗಳಿಗೆ ತಂಡಗಳನ್ನು ಶಾಲಾ ಬಸ್‍ನಲ್ಲಿ ಕರೆದೊಯ್ಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. :: ಉದ್ಘಾಟನೆ :: ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಅ.4 ರಂದು ಬೆಳಗ್ಗೆ 8.30 ಗಂಟೆಗೆ ಮಡಿಕೇರಿಯ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ನಗರದ ಫೀ.ಮಾ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನ ಪಂದ್ಯವನ್ನು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ)ದ ತಂಡ ಮತ್ತು ಕೊಡಗು ವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ತಂಡಗಳ ನಡುವೆ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭ ಮತ್ತು ಅಂತಿಮ ಪಂದ್ಯಗಳು ಅ.7 ರಂದು ಕೂಡಿಗೆಯಲ್ಲಿ ನಡೆಯಲಿದೆ. ಸಮಾರೋಪದಲ್ಲಿ ಅಂತರಾಷ್ಟ್ರೀಯ ಹಾಕಿ ಪಟು, ಮಾಜಿ ಒಲಂಪಿಯನ್ ಬಿ.ಕೆ.ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಸ್.ಸುಮಿತ್ರ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕರು ಹಾಗೂ ಪಂದ್ಯಾವಳಿ ಆಯೋಜನಾ ಸಮಿತಿ ನಿರ್ದೇಶಕ ಡಿ.ದಾಮೋದರ ಗೌಡ, ವಿದ್ಯಾಸಂಸ್ಥೆಯ ಆಡಳಿತ ವಿಭಾಗದ ವ್ಯವಸ್ಥಾಪಕ ಪಿ.ರವಿ, ದೈಹಿಕ ಶಿಕ್ಷಕರುಗಳಾದ ಹೆಚ್.ಟಿ.ದೀನ ಹಾಗೂ ಕೆ.ಎ.ಪಾರ್ವತಿ ಉಪಸ್ಥಿತರಿದ್ದರು.