ಮಡಿಕೇರಿ ಅ.2 NEWS DESK : ತಾಜುಲ್ ಉಲಮಾ ಉಳ್ಳಾಲ ತಂಙಲ್(ಖ.ಸಿ)ರವರ 11ನೇ ಉರೂಸ್ ಕಾರ್ಯಕ್ರಮ ಯಶಸ್ವಿಗೊಳಿಸಲು ಕೊಡಗು ಜಿಲ್ಲಾ ಮದನೀಸ್ ಅಸ್ಸೋಸಿಯೇಷನ್ ಕರೆ ನೀಡಿದೆ. 6 ದಶಕಗಳ ಕಾಲ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ)ರವರು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಉಳ್ಳಾಲವನ್ನು ಕೇಂದ್ರವಾಗಿಸಿಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗಗಳಲ್ಲಿ ಮಹೋನ್ನತ ಸೇವೆಗಳನ್ನು ಮಾಡುವುದರೊಂದಿಗೆ ಸುನ್ನೀ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಹಚ್ಚಿದ, 4 ಸಾವಿರಕ್ಕೂ ಅಧಿಕ ಉನ್ನತ ಉಲಮಾಗಳನ್ನು ಸಮುದಾಯಕ್ಕೆ, ಪವಿತ್ರ ಧರ್ಮಕ್ಕೆ ಸಮರ್ಪಿಸಿದ, ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸುಧೀರ್ಘಕಾಲದ ಅಧ್ಯಕ್ಷರು, ಅಖಿಲ ಭಾರತ ಉಲಮಾ ಒಕ್ಕೂಟದ ನಿರ್ದೇಶಕರೂ ಆಗಿದ್ದ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ -ಬುಖಾರಿ(ಖ.ಸಿ)ರವರ 11ನೇ ಉರೂಸ್ ಇದೇ ಅಕ್ಟೋಬರ್ 4, 5, 6 ದಿನಾಂಕಗಳಲ್ಲಿ ಕೇರಳದ ಪಯ್ಯನ್ನೂರಿನ ಎಟ್ಟಿಕುಳಂನಲ್ಲಿ ನಡೆಯಲಿದೆ. ಈ ಉರೂಸ್ ನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸತ್ಯವಿಶ್ವಾಸಿಗಳು ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಮದನೀಸ್ ಅಸ್ಸೋಸಿಯೇಷನ್ ಅದ್ಯಕ್ಷರಾದ ಹಮೀದ್ ಮದನಿ ಅವರು ತಿಳಿಸಿದ್ದಾರೆ.