ಸಿದ್ದಾಪುರ ಅ.2 NEWS DESK : ಮಾಲ್ದಾರೆಯ ಜನಪರ ಸಂಘಟನೆ ವತಿಯಿಂದ ಗುಡ್ಲೂರು ಗ್ರಾಮದಲ್ಲಿ 155ನೇ ಗಾಂಧಿ ಜಯಂತಿಯನ್ನ ಅಚರಿಸಲಾಯಿತು. ಗ್ರಾಮದ ನಿಲ್ದಾಣ ಬಳಿ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಮಾಜ ಸೇವಕ ಬಾಲನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾತ್ಮ ಗಾಂಧಿಯ ಜೀವನ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಸ್ವತಂತ್ರವಾಗಿ ಸಂವಿಧಾನದ ಆಶಯದಂತೆ ಬದುಕಲು ಮಹಾತ್ಮ ಗಾಂಧೀಜಿಯವರ ತ್ಯಾಗ ಪರಿಶ್ರಮ ಕಾರಣವಾಗಿದೆ. ಶಾಂತಿಯುತವಾಗಿ ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವದಾದ್ಯಂತ ಗಾಂಧಿ ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೂಪೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ನಾರಾಯಣ, ಪ್ರಮುಖರಾದ ಪ್ರೇಮ, ಮೂರ್ತಿ, ಚೋಳರಾಜ್, ಅಗಸ್ಟಿನ್, ಪ್ರಭಾಕರ್, ಎರ್ಮು, ರಂಜು, ಶಿಜು ಸೇರಿದಂತೆ ಸ್ಥಳೀಯರು ಹಾಜರಿದ್ದರು.