ಮಡಿಕೇರಿ ಅ.3 NEWS DESK : ಇಂದಿನ ಯುವ ಜನಾಂಗ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕೆಂದು ಸುಂಟ್ಟಿಕೊಪ್ಪ ನಾಡ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಬಾಲ ವಾಗ್ಮಿ ಶ್ರೀಶಾ ಅಭಿಪ್ರಾಯಪ್ಟರು. ಕಂಡಕರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಯುವಕ ಸಂಘದಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮದಿನ ಹಾಗೂ ಶ್ರಮದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಪ್ರಸ್ತುತ ಸಮಾಜಕ್ಕೆ ಮಾದರಿ. ನಾವೆಲ್ಲರೂ ಗಾಂಧೀಜಿಯ ಜೀವನ ಶೈಲಿಯನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯಬೇಕು. ಗಾಂಧೀಜಿಯವರ ತ್ಯಾಗ, ಹೋರಾಟದ ಫಲವಾಗಿ ನಾವೆಲ್ಲರೂ ಇಂದು ಒಂದುಗೂಡಿ ಜೀವನ ನಡೆಸುತ್ತಿರುವುದು. ಅದಲ್ಲದೇ ಮುಖ್ಯವಾಗಿ ಇಂದಿನ ಯುವ ಸಮೂಹ ಮತ್ತು ವಿದ್ಯಾರ್ಥಿಗಳು ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಬೇಕಾಗಿದೆ ಎಂದು ಶ್ರೀಶಾ ಕರೆ ನೀಡಿದರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಟಿ.ಎನ್.ರತೀಶ್ ಮಾತನಾಡಿ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ನಾವೆಲ್ಲರೂ ಸೇರಿ ನಮ್ಮ ಗ್ರಾಮ, ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಯಿಂದ ಇಡಬೇಕಾಗಿದೆ. ಮುಖ್ಯವಾಗಿ ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದರು. ಕಳೆದ ಎರಡು ವರ್ಷಗಳಿಂದ ಕಂಡಕರೆಯ ಗಾಂಧಿ ಯುವಕ ಸಂಘವು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಸಮವಸ್ತ್ರ, ಶಾಲೆಗೆ ಬೇಕಾದ ಸವಲತ್ತುಗಳನ್ನು ನೀಡಿದ್ದಾರೆ.
ಅದಲ್ಲದೇ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ನೀಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಟಿ.ಎನ್ ರತೀಶ್ ಅಭಿಪ್ರಾಯಪಟ್ಟರು. ಗಾಂಧಿ ಜಯಂತಿಯ ಪ್ರಯುಕ್ತ ಗಾಂಧಿ ಯುವಕ ಸಂಘದಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ನಡೆಯಿತು. 1 ರಿಂದ 4ನೇ ತರಗತಿಯವರೆಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 4ನೇ ತರಗತಿಯ ಸುಬ್ಹಾನ್ ಕೆ.ಎಚ್ ಪ್ರಥಮ,ಶುಹೈಬ್ ದ್ವಿತೀಯ ಹಾಗೂ ನಿಯಾಝ್ ತೃತೀಯ ಸ್ಥಾನ ಪಡೆದುಕೊಂಡರು. 5 ರಿಂದ 7ನೇ ತರಗತಿಯ ಮಕ್ಕಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ 7ನೇ ತರಗತಿಯ ಇಭಾ ಪ್ರಥಮ,ಆರನೇ ತಗರತಿಯ ಆಶಿಕ್ ದ್ವಿತೀಯ ಹಾಗೂ ಐದನೇ ತರಗತಿಯ ರಿಶಿತಾ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಗಾಂಧಿ ಯುವಕ ಸಂಘದಿಂದ ಟ್ರೋಫಿ ನೀಡಿ ಗೌರವಿಸಲಾಯಿತು. 2023-24ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ನಜಾ ಫಾತೀಮಾ,ದ್ವಿತೀಯ ಸ್ಥಾನ ಪಡೆದ ಅಫ್ರೀನಾ,ತೃತೀಯ ಸ್ಥಾನ ಪಡೆದ ಶಮ್ನಾ ಫಾತೀಮಾ ಅವರಿಗೆ ಗಾಂಧಿ ಯುವಕ ಸಂಘದಿಂದ ಬಹುಮಾನ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಗಾಂಧಿ ಯುವಕ ಸಂಘದಿಂದ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಗಾಂಧಿ ಯುವಕ ಸಂಘದ ಅಧ್ಯಕ್ಷ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪೂಜಾ ಮುರಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಜೀದ್ ಕಂಡಕರೆ, ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸವಾದ್ ಉಸ್ಮಾನ್, ಹಿರಿಯ ಪಿ.ಎಂ.ಉಪಾಧ್ಯಕ್ಷ ಷರೀಫ್, ಉಪಾಧ್ಯಕ್ಷ ಕೆ.ಎಂ.ಇರ್ಷಾದ್ , ಸಂಘಟನಾ ಕಾರ್ಯದರ್ಶಿ ಸಿ.ಎ.ಉಬೈಸ್ ಹಾಗೂ ಗಾಂಧಿ ಯುವಕ ಸಂಘದ ಪದಾಧಿಕಾರಿಗಳು ,ಎಸ್.ಡಿ.ಎಂ.ಸಿ ಸದಸ್ಯರು ಇದ್ದರು. ಶಾಲೆಯ ಶಿಕ್ಷಕಿ ವಿನೋದ ನಿರೂಪಿಸಿ, ಸುಜಿತ್ ಸ್ವಾಗತಿಸಿದರು.