ಮಡಿಕೇರಿ ಅ.3 NEWS DESK : ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ `ನೈತಿಕತೆಯೇ ಸ್ವಾತಂತ್ರ್ಯ’ ಎಂಬ ಶೀರ್ಷಿಕೆಯಡಿ ರಾಷ್ಟ್ರವ್ಯಾಪಿ ನಡೆದ ರಾಷ್ಟ್ರೀಯ ಅಭಿಯಾನದ ಸಮಾರೋಪ ಸಮಾರಂಭವು ಅ.6 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಝೈನಬಾ ರೆಹಮಾನ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ಹೆಚ್.ಎಂ.ಕಾವೇರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಜಿ ಗಣ್ಯ ಉಪಸ್ಥಿತರಿರಲಿದ್ದು, ಮಂಗಳೂರಿನ ಲುಬ್ನಾ ಝಕಿಯಾ `ನೈತಿಕತೆಯೇ ಸ್ವಾತಂತ್ರ್ಯದ ಭರವಸೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲು ಅಭಿಯಾನದ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಕೊಡಗಿನಲ್ಲಿ ಮಹಿಳಾ ಸಮಾವೇಶ, ಗಣ್ಯ ವ್ಯಕ್ತಿಗಳ ಭೇಟಿ-ಸಂದರ್ಶನ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಮನೆ ಮನೆಗೆ ಭೇಟಿ, ಸತ್ಕಾರ ಕೂಟ ಹಮ್ಮಿಕೊಳ್ಳಲಾಗಿತ್ತು ಎಂದರು. ಘಟಕದ ಜಿಲ್ಲಾ ಕಾರ್ಯದರ್ಶಿ ಮುಹೀನಾ ಮುಹಮ್ಮದ್ ಮಾತನಾಡಿ, ಇತ್ತೀಚೆಗೆ ಸಮಾಜ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳು ಕಳವಳಕಾರಿಯಾಗಿದೆ. ನಗ್ನತೆ, ಜೂಜು, ಮದ್ಯಪಾನ, ಮಾದಕ ವ್ಯಸನ, ವಿವಾಹೇತರ ಸಂಬಂಧಗಳು, ಸಲಿಂಗಕಾಮ ಮತ್ತು ವೇಶ್ಯಾವಾಟಿಕೆಯಂತಹ ಕೆಡುಕುಗಳು ಸಮಾಜ ಹದಗೆಡುತ್ತಿರುವುದಕ್ಕೆ ಕೈಗನ್ನಡಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಯುವ ಜನಾಂಗ ದಾರಿ ತಪ್ಪುತ್ತಿದ್ದು, ಕುಟುಂಬಗಳು ಛಿದ್ರಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಉತ್ತಮ ಸಮಾಜ ನಿರ್ಮಾಣದ ಉದ್ದೇಶದಿಂದ ದೇಶದ ಉದ್ದಗಲಕ್ಕೂ ನಡೆಸಿದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವುದಾಗಿ ಮುಹೀನಾ ಮುಹಮ್ಮದ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಮಡಿಕೇರಿ ಸ್ಥಾನೀಯ ಕಾರ್ಯದರ್ಶಿ ಪ್ರಮುಖರಾದ ಕೈರುನೀಸಾ, ಕಾರ್ಯಕರ್ತರಾದ ಮಫೀದಾ ಅಬ್ದುಲ್ಲ ಹಾಗೂ ತಾಹಿರಾ ರಶೀದ್ ಉಪಸ್ಥಿತರಿದ್ದರು.