ಮಡಿಕೇರಿ ಅ.7 NEWS DESK : ಬಲ್ಲಮಾವಟಿಯ ನಾಲ್‍ನಾಡ್ ಹಾಕಿ ಕ್ಲಬ್ ವತಿಯಿಂದ ಅ.29 ರಿಂದ ನ.2ರವರೆಗೆ ನಾಲ್‍ನಾಡ್ ವ್ಯಾಪ್ತಿಯ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯಲಿದೆ ಎಂದು ಕ್ಲಬ್ ನ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಬಲ್ಲಮವಾಟಿಯ ನೇತಾಜಿ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು. ಹಾಕಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ನಾಲ್‍ನಾಡ್ ವ್ಯಾಪ್ತಿಯ 16 ತಂಡಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಶಾಲೆಯ ಬೇಸಿಗೆ ರಜೆಯ ದಿನಗಳಲ್ಲಿ ಕಿರಿಯ ಮಕ್ಕಳಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದೆಂದು ತಿಳಿಸಿದರು. ಕಾರ್ಯದರ್ಶಿ ಚಂಗೇಟಿರ ಸೋಮಣ್ಣ ಮಾತನಾಡಿ, ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಈ ಪಂದ್ಯಾವಳಿಯ ಪ್ರಯೋಜಕರಾಗಿದ್ದು, ಹಾಕಿ ಪಂದ್ಯಾವಳಿಯ ಪ್ರಥಮ ಸ್ಥಾನದ ಟ್ರೋಫಿಯನ್ನು ನೆಲಜಿ ಗ್ರಾಮದ ಮಾಳೆಯಂಡ ದಿ.ಲಲಿತ ಚೋಂದವ್ವ ಜ್ಞಾಪಕಾರ್ಥವಾಗಿ ಅವರ ಪತಿ ಭೀಮಯ್ಯ ಮತ್ತು ಪುತ್ರ ಬಿನ್ನು ಪೊನ್ನಣ್ಣ, ದ್ವಿತೀಯ ಸ್ಥಾನದ ಟ್ರೋಫಿಯನ್ನು ಪೇರೂರು ಗ್ರಾಮದ ಮೂವೇರ ದಿ.ಚಂಗಪ್ಪ ಮತ್ತು ಅಂಬಿಕಾ ಅವರ ಜ್ಞಾಪಕಾರ್ಥವಾಗಿ ಪುತ್ರ ವಿಜು ಮಂದಣ್ಣ ನೀಡಲಿದ್ದಾರೆ. ಮಹಿಳೆಯರ ಹಗ್ಗಜಗ್ಗಾಟ ಪ್ರಥಮ ಟ್ರೋಫಿಯನ್ನು ಬಲ್ಲಮಾವಟಿ ಗ್ರಾಮದ ಚೀಯಂಡಿರ ದಿ.ಗಣಪತಿ ಅವರ ಜ್ಞಾಪಕಾರ್ಥವಾಗಿ ಪತ್ನಿ ಲಲಿತ ಮತ್ತು ಮಗ ದಿನೇಶ್, ದ್ವಿತೀಯ ಸ್ಥಾನದ ಟ್ರೋಫಿಯನ್ನು ಪೇರೂರು ಗ್ರಾಮದ ಮಚ್ಚುರ ದಿ.ಮಂದಣ್ಣ ಅವರ ಜ್ಞಾಪಕಾರ್ಥವಾಗಿ ಮಗ ಯದುಕುಮಾರ್ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಲ್‍ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಖಜಾಂಚಿ ಚೀಯಂಡಿರ ದಿನೇಶ್ ಹಾಗೂ ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್ ಉಪಸ್ಥಿತರಿದ್ದರು.