ವಿರಾಜಪೇಟೆ ಅ.7 NEWS DESK : ಮಾನವೀಯತೆಗಿಂತ ಮಿಗಿಲಾದ ನೈತಿಕತೆ ಬೇರೆ ಇಲ್ಲ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಲುಬ್ನಾ ಝಕಿಯಾ ಹೇಳಿದ್ದಾರೆ. ವಿರಾಜಪೇಟೆ ಸಮೀಪದ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಮಾಸಿಕ ತತ್ವ ಚಿಂತನ ಗೋಷ್ಠಿ ಹೊಂಬೆಳಕಿನ 224ನೇಯ ಕಿರಣ ಕಾರ್ಯಕ್ರಮದಲ್ಲಿ “ನೈತಿಕತೆಯೇ ಸ್ವಾತಂತ್ರ್ಯದ ಭರವಸೆ” ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿ ಅನೈತಿಕತೆಗೆ ಕಾರಣವಾಗುವ ಎಲ್ಲಾ ಹಾದಿಗಳಿಗೆ ಕಡಿವಾಣ ಹಾಕಲು ಕಾನೂನು ನಿರ್ಮಾಣ ಆಗಬೇಕು. ಮಾನವ ನಿರ್ಮಿತ ಕಾನೂನುಗಳಿಗಿಂತ ದೇವ ನಿರ್ಮಿತ ಕಾನೂನುಗಳು ಕೆಡುಕುಗಳನ್ನು ತಡೆಯುತ್ತವೆ. ಮನುಷ್ಯ ತಾನೊಬ್ಬ ಉತ್ತರದಾಯಿತ್ವವಿರುವ ಪ್ರಜೆ ಎಂಬುದನ್ನು ಮರೆತು ಬಿಟ್ಟಿರುವುದು ಕೆಡುಕುಗಳಿಗೆ ಕಾರಣವಾಗಿದೆ. ಹೊಣೆಗಾರಿಕೆಯಿಂದ ಜಾರುವ ಮನೋಧರ್ಮ ಇಂದಿನ ಪೀಳಿಗೆಯ ಮುಖಮುದ್ರಯೆನಿಸಿಬಿಟ್ಟಿದೆ. ಇಂದು ವಿಶ್ವವು ನೈತಿಕ ದಿವಾಳಿತನವನ್ನು ಅತಿಯಾಗಿ ಎದುರಿಸುತ್ತಿದೆ. ಆಧುನಿಕತೆಯು ಪ್ರಗತಿಪರ ಎಂಬ ವಾದದೊಂದಿಗೆ ನೈತಿಕತೆಯ ಎಲ್ಲೆಗಳನ್ನು ಮೀರಲಾಗುತ್ತಿದೆ” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆÉಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ.ಹೆಚ್.ಎಂ.ಕಾವೇರಿ “ನೈತಿಕತೆ ಮತ್ತು ಮೌಲ್ಯಗಳು ಜಾತಿಗೆ ಮತ್ತು ಲಿಂಗಕ್ಕೆ ಸೀಮಿತವಲ್ಲ. ಸ್ವಾತಂತ್ರ್ಯ ಎಂಬುದು ಸ್ವೇಚ್ಚಾಚಾರವಲ್ಲ, ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಅವರವರ ಹಕ್ಕುಗಳನ್ನು ನಿಭಾಯಿಸಿದಲ್ಲಿ ಸಮಾಜ ನೆಮ್ಮದಿಯಿಂದ ಕೂಡಿರುತ್ತದೆ. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ನೈತಿಕ ಶಿಕ್ಷಣದ ಅತಿಯಾದ ಅಗತ್ಯ ಇಂದು ಇದೆ ಎಂದರು. ದಿವ್ಯಸಾನಿಧ್ಯ ವಹಿಸಿದ್ದ ಶ್ರೀಮಠದ ಮಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ “ಕೆಡುಕುಗಳಿಕೆ ಕಡಿವಾಣ ಹಾಕುವ ಧರ್ಮ ಬೋಧನೆÀಗಳು ಇಂದಿನ ಪ್ರಗತಿಪರರು ಎನಿಸಿಕೊಂಡವರಿಗೆ ರುಚಿಸುವುದಿಲ್ಲ. ಧರ್ಮವನ್ನು ಒಪ್ಪಿಕೊಳ್ಳುವುದರಿಂದ ಎಲ್ಲಾ ಸ್ವಾತಂತ್ರ್ಯಗಳಿಗೂ ಕುಂದು ಉಂಟಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಧರ್ಮವನ್ನು ಜೀವನದಲ್ಲಿ ಕೈಬಿಟ್ಟಿರುವುದರಿಂದ ಕುಟುಂಬ ಸಂಬಂಧಗಳು ಕಲುಷಿತವಾಗುತ್ತಿದೆ. ಕಲೆಯ ಮತ್ತು ಪ್ರತಿಭೆಯ ಪ್ರತಿರೂಪಗಳಾಗಿದ್ದ ಧಾರವಾಹಿಗಳು ಇಂದು ಕುಟುಂಬ ಕಲಹಗಳಿಗೆ ಪುಷ್ಟಿ ನೀಡುತ್ತಿವೆ. ಮೊಬೈಲ್ ಚಾಟಿಂಗ್ ಸಾಮಾಜಿಕ ಜಾಲತಾಣಗಳಿಂದ ಸಂಬಂಧಗಳು ಕಡಿತಗಳ್ಳುತ್ತಿವೆ. ದೇಶದ ಹೆಣ್ಣುಮಕ್ಕಳು ಇಂದು ತಮ್ಮ ಕೆಲಸದ ಜಾಗದಲ್ಲಿಯೂ ಸುರಕ್ಷಿತಳಾಗಿಲ್ಲ. ದೇವವಿಶ್ವಾಸ-ಸ್ವಾತಂತ್ರ್ಯ-ನೈತಿಕತೆಗೆ ಯಾವುದೇ ಅಡ್ಡಬೇಲಿಗಳಿಲ್ಲ. ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ರಾಷ್ಟ್ರವ್ಯಾಪಿಯಾಗಿ ನೈತಿಕ ಪ್ರಜ್ಞೆ ಮೂಡಿಸುವ ಅಭಿಯಾನವನ್ನು ನಡೆಸುತ್ತಿರುವುದು ಶ್ಲಾಘನೀಯ” ಎಂದರು. ಶಪೀನಾ ಮುಹಮ್ಮದ್‍ರವರ ಖಿರಾಅತ್‍ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮುಹೀನಾ ಅಬೂಬಕರ್ ಸ್ವಾಗತಿಸಿದರು. ಸಮೀರಾ ರಾಝಿಕ್ ಧನ್ಯವಾದ ಸಮರ್ಪಿಸಿದರು.