ಮಡಿಕೇರಿ ಅ.7 NEWS DESK : ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.8 ರಂದು 7 ನೇ ವಷ೯ದ ಮಹಿಳಾ ದಸರಾ ಆಯೋಜಿಸಲಾಗಿದ್ದು, ವೈವಿಧ್ಯಮಯ ಸ್ಪಧೆ೯ಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಮತ್ತು ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಷ್ ತಿಳಿಸಿದ್ದಾರೆ. ಮಹಿಳಾ ದಸರಾ ಅಂಗವಾಗಿ ಮಡಿಕೇರಿ ನಗರಸಭೆಯ ಸದಸ್ಯೆಯರು, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೖದ್ದಿ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಮಹಿಳೆಯರಿಗಾಗಿಯೇ ವೈವಿಧ್ಯಮಯ ಸ್ಪಧೆ೯ಗಳು, ಕಾಯ೯ಕ್ರಮಗಳು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಆಯೋಜಿತವಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮೆಹಂದಿ ಹಾಕುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಒಂಟಿ ಕಾಲಿನ ಓಟ, ಕಪ್ಪೆ ಜಿಗಿತ, ಕೇಶವಿನ್ಯಾಸ, ಗಾರ್ಭ ನೃತ್ಯ, ಸೀರೆಗೆ ನಿಖರ ಬೆಲೆ ಹೇಳುವ ಸ್ಪರ್ಧೆ, 60 ವರ್ಷ ಮೇಲ್ಪಟ್ಟವರಿಗೆ ಅಜ್ಜಿ ಜೊತೆ ಮೊಮಕ್ಕಳ ನಡಿಗೆ, ವಾಲಗ ನೃತ್ಯ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದ ಸಿಟಿ ಸ್ಪರ್ಧೆಗಳು ನಡೆಯಲಿದೆ. ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಸರಿಗಮ ಖ್ಯಾತಿಯ ಸುರೇಖಾ, ಪ್ರಥ್ವಿ ಭಟ್, ರೇಷ್ಮಾ, ಸ್ನೇಹ ನಂಜಪ್ಪ ಮತ್ತು ತಂಡದಿಂದ ಸಂಗೀತ ರಸಸಂಜೆ ನಡೆಯಲಿದೆ.