ಮಡಿಕೇರಿ ಅ.7 NEWS DESK : ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯ ಶ್ರೀಕಾವಾಡಿ ಭಗವತಿ ದೇವಸ್ಥಾನದ ಸುತ್ತಮುತ್ತ ದೇವರಕಾಡು ಇದ್ದು, ಇದರಲ್ಲಿ ಒಂದು ಏಕರೆಯನ್ನು ಹಿಂದೂ ರುದ್ರಭೂಮಿಗಾಗಿ ನೋಂದಣಿ ಮಾಡಿಕೊಳ್ಳಲು ಕೊಡಗು ಜಿ.ಪಂ ಅನುಮತಿ ನೀಡಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ, ಅಮ್ಮತ್ತಿ ರೈತ ಸಂಘ, ಅಖಿಲ ಕೊಡವ ಸಮಾಜ ಹಾಗೂ ಅಮ್ಮತ್ತಿ ಕೊಡವ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮ್ಮತ್ತಿ ರೈತ ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸಿ.ಸುಬ್ಬಯ್ಯ ಅವರು, ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ಕುಂಬೇರಿ ಗ್ರಾಮದಲ್ಲಿ ಹಿಂದೂ ಸ್ಮಶಾನಕ್ಕೆಂದು 1.70 ಏಕರೆ ಜಾಗವಿದ್ದರೂ ದೇವರಕಾಡಿನಲ್ಲಿ ಮತ್ತೆ ಸ್ಮಶಾನಕ್ಕೆ ಜಾಗ ನೀಡಿರುವುದನ್ನು ಎಲ್ಲರೂ ವಿರೋಧಿಸುತ್ತೇವೆ. ಸಿಇಓ ಅವರು ನೀಡಿದ ಅನುಮತಿಯನ್ನು ತಕ್ಷಣ ಹಿಂಪಡೆದು ದೇವರಕಾಡನ್ನು ಹಾಗೆಯೇ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದರು. ಕೊಡಗಿನ ಎಲ್ಲಾ ಊರು ಊರಿನಲ್ಲಿರುವ ದೇವಸ್ಥಾನಗಳಿಗೆ ದೇವರ ಕಾಡು ಇದ್ದು, ಅದನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನವರು ಪುರಾತನ ಕಾಲದಿಂದಲೂ ಪೋಷಿಸಿ, ಸಂರಕ್ಷಿಸಿ ಸಂಸ್ಕೃತಿಗನುಗುಣವಾಗಿ ಉಳಿಸಿಕೊಂಡು ಬರುತ್ತಿದ್ದಾರೆ. ಕಾರ್ಮಾಡು ಗ್ರಾ.ಪಂ ವ್ಯಾಪ್ತಿಯ ಕಾವಾಡಿ ಭಗವತಿ ದೇವಸ್ಥಾನವು ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದ್ದು ಕಾವಾಡಿ, ಕಾರ್ಮಾಡು ಮತ್ತು ಕುಂಬೇರಿ ಗ್ರಾಮಸ್ಥರಿಗೆ ಸೇರಿದ್ದಾಗಿದೆ. ಶ್ರೀ ಭಗವತಿ ದೇವಸ್ಥಾನಕ್ಕೆ ಅಂದಾಜು 50 ಏಕರೆಯಷ್ಟು ಬೇರೆ ಬೇರೆ ದೇವರಕಾಡು ವಿವಿಧ ಹೆಸರಿನಲ್ಲಿ ಹಾಗೂ ವಿಸ್ತೀರ್ಣದಲ್ಲಿದ್ದು, ಊರಿನವರ ಸ್ವಾಧೀನಾನುಭವದಲ್ಲಿ ಪೂಜೆ- ಪುನಸ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇವರಕಾಡಿನಲ್ಲಿ ಸ್ಮಶಾನಕ್ಕೆ ಜಾಗ ನೀಡಿರುವುದು ಕಾನೂನಿಗೆ ಮತ್ತು ಭಕ್ತರ ಭಾವನೆಗೆ ವಿರುದ್ಧವಾಗಿದೆ. ಅಲ್ಲದೆ ಇದು ಶಾಂತಿಯನ್ನು ಕದಡುವ ಯತ್ನವಾಗಿದೆ. ಕೊಡಗಿನ ವಿವಿಧೆಡೆ ದೇವರಕಾಡನ್ನು ಅತಿಕ್ರಮಣ ಮಾಡಿರುವುದು ಸರಕಾರದ ಗಮನಕ್ಕೆ ಬಂದಿದ್ದರು ತೆರವು ಮಾಡಲು ನಿರ್ಲಕ್ಷ್ಯ ವಹಿಸಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು. ದೇವರಕಾಡುಗಳನ್ನು ಸಂರಕ್ಷಿಸುವ ಸಲುವಾಗಿ ಕೊಡಗಿನ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ, ಸಂಘ ಸಂಸ್ಥೆಗಳನ್ನು ಒಂದೇ ವೇದಿಕೆಗೆ ಆಹ್ವಾನಿಸಬೇಕು. ಆರ್‍ಟಿಸಿ ಯಲ್ಲಿ ಹೆಸರು ಸೇರಿಸಲು ತಕ್ಷಣ ಸಭೆಯನ್ನು ಕರೆದು ಸರಕಾರದ ಮೂಲಕ ಹಕ್ಕು ಬದಲಾವಣೆಗೆ ಕಾನೂನಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಬಿದ್ದಂಡ ಸಿ.ಸುಬ್ಬಯ್ಯ ಒತ್ತಾಯಿಸಿದರು. ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಹಾಗೂ ಶಾಸಕರನ್ನು ಒಂದೇ ವೇದಿಕೆಗೆ ಆಹ್ವಾನಿಸಿ ದೇವರಕಾಡಿನ ಬಗ್ಗೆ ಅಹವಾಲುಗಳನ್ನು ಸಲ್ಲಿಸಿ ಶೀಘ್ರ ಪರಿಹಾರಕ್ಕೆ ಕೋರುವುದಾಗಿ ತಿಳಿಸಿದರು. ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಯು.ಗಣಪತಿ ಮಾತನಾಡಿ ಊರಿನವರ ಅಭಿಪ್ರಾಯ ಸಂಗ್ರಹಿಸದೆ ದೇವರಕಾಡಿನ ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟಿರುವುದು ಸರಿಯಾದ ಕ್ರಮವಲ್ಲವೆಂದರು. ಸುದ್ದಿಗೋಷ್ಟಿಯಲ್ಲಿ ಕಾವಾಡಿ ಭಗವತಿ ದೇವಾಲಯದ ದೇವತಕ್ಕರಾದ ಮುಕ್ಕಾಟೀರ ಚಂಗು ನಾಚಪ್ಪ, ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ಶರಿ ವಿಜಯಕುಮಾರ್, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಹಾಗೂ ಪರಿಸರವಾದಿ ಕರ್ನಲ್ ಸಿ.ಪಿ.ಮುತ್ತಣ್ಣ ಉಪಸ್ಥಿತರಿದ್ದರು.