ಮಡಿಕೇರಿ ಅ.7 NEWS DESK : ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಹೆಚ್ಚಾಗಿ ಉತ್ಪಾದಿಸುತ್ತಿದ್ದು, ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ ಏರ್ಪಡಿಸಲಾಗಿದ್ದ ಮೊದಲ ವರ್ಷ ಕಾಫಿ ದಸರಾ ಕಾರ್ಯಕ್ರಮದಲ್ಲಿ ಕಾಫಿ ಹಾಗೂ ವಿವಿಧ ಕೃಷಿ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಕಾಫಿ ದಸರಾವು ಒಂದು ವೇದಿಕೆಯಾಗಿದ್ದು, ಕಾಫಿ ಕೃಷಿಯಲ್ಲಿ ಕೊಡಗಿನ ಜನರು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ಕಾಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ ಎಂದು ಡಾ.ಮಂತರ್ ಗೌಡ ಸಲಹೆ ಮಾಡಿದರು. ಕಾಫಿ ದಸರಾ ವಿಚಾರ ಸಂಕಿರಣದಲ್ಲಿ ವಿವಿಧ ತಜ್ಞರು, ವಿಜ್ಞಾನಿಗಳು, ಕೃಷಿಕರು ಪಾಲ್ಗೊಂಡು ಕಾಫಿ ಉತ್ತೇಜನ ಸಂಬಂಧಿಸಿದಂತೆ ಹಲವು ಅಭಿಪ್ರಾಯ, ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ತಜ್ಞರ ಅಭಿಪ್ರಾಯವನ್ನು ಕ್ರೊಢೀಕರಿಸಿ ಕಾಫಿ ಬೆಳೆಯಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಶ್ರಮಿಸಬೇಕಿದೆ ಎಂದರು. ಕೊಡಗು ಜಿಲ್ಲೆಯ ಕಾಫಿಗೆ ದೇಶ ವಿದೇಶಗಳಲ್ಲೂ ಮಾರುಕಟ್ಟೆ ಸೌಲಭ್ಯ ಒದಗುವಂತಾಗಬೇಕು. ಆ ನಿಟ್ಟಿನಲ್ಲಿ ಕಾಫಿ ಬೆಳೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಡಾ.ಮಂತರ್‍ಗೌಡ ನುಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಪ್ರಥಮ ಬಾರಿಗೆ ಕಾಫಿ ದಸರಾ ಏರ್ಪಡಿಸಿರುವುದು ವಿಶೇಷವಾಗಿದೆ. ಕೊಡಗಿನ ಕಾಫಿ ಬೆಳೆ ಪ್ರಗತಿ ಹಾಗೂ ಸಾಧಕರ ಬಗ್ಗೆ ದಾಖಲೀಕರಣವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾಫಿ ಟೇಬಲ್ ಹೊರತರಲು ಪ್ರಯತ್ನಿಸಲಿದೆ ಎಂದು ತಿಳಿಸಿದರು. ಕಾಫಿ ಬೆಳೆಯ ಪ್ರಗತಿಪರ ಕೃಷಿಕರಾದ ಧರ್ಮರಾಜ ಅವರು ಮಾತನಾಡಿ ಕಾಫಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಹಲವು ಪ್ರಯೋಗಗಳನ್ನು ಮಾಡಬೇಕಿದೆ. ಸರಿಯಾದ ಸಮಯಕ್ಕೆ ಮಳೆಯಾಗಬೇಕು. ಜೊತೆಗೆ ರಸಗೊಬ್ಬರ ಪೂರೈಕೆ ಮತ್ತಿತರವನ್ನು ಸಕಾಲದಲ್ಲಿ ನಿರ್ವಹಿಸಿದ್ದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಅತಿಯಾದ ರಸಗೊಬ್ಬರವು ಸಹ ಕಾಫಿ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಮಳೆಗೆ ತಕ್ಕಂತೆ ರಸಗೊಬ್ಬರ ಹಾಕಬೇಕು. ಕಾಫಿ ಗಿಡ ಸಂರಕ್ಷಣೆ ಸಂಬಂಧಿಸಿದಂತೆ ಗಾಳಿ, ನೀರು, ಬೆಳಕು ಬಗ್ಗೆ ಕಾಫಿ ಬೆಳೆಗಾರರಲ್ಲಿ ಕನಿಷ್ಠ ಮಾಹಿತಿ ಇರಬೇಕು ಎಂದು ಧರ್ಮರಾಜ ಹೇಳಿದರು. ಕೊಡಗು ಪ್ಲಾಂಟರ್ಸ್ ಅಸೋಷಿಯೇಷನ್‍ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ಕೆ.ವಿಶ್ವನಾಥ ಅವರು ಮಾತನಾಡಿ ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆ ಪ್ರದೇಶದಿಂದ ಪ್ರದೇಶಕ್ಕೆ ಇಳುವರಿಯಲ್ಲಿ ವ್ಯತ್ಯಾಸವಾಗಿರುತ್ತದೆ. ಆದ್ದರಿಂದ ಸುಸ್ಥಿರ ಬೆಳೆ ನಿರೀಕ್ಷೆ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ವಿವರಿಸಿದರು. ಕಾಫಿ ಬೆಳೆ ಸಂಬಂಧಿಸಿದಂತೆ ಮಾರುಕಟ್ಟೆ ಬೆಲೆ ಗಮನಿಸಿ ಕಾಫಿ ಮಾರಾಟ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕಾಫಿ ಬೆಳೆ ಸಂಬಂಧ ಹೆಚ್ಚಿನ ನಿಗಾವಹಿಸಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆಯ ಬಗ್ಗೆ ಮಾಹಿತಿ ಇರಬೇಕು ಎಂದು ತಿಳಿಸಿದರು. ಕೃಷಿಕರಾದ ಭೋಸ್ ಮಂದಣ್ಣ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿ ಇಳುವರಿ ಪಡೆಯಲಾಗುತ್ತದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ ದಸರಾ ಏರ್ಪಡಿಸಿರುವುದು ವಿಶೇಷವಾಗಿದೆ ಎಂದು ಅವರು ಶ್ಲಾಘಿಸಿದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನಾ ಭರತ್ ಅವರು ಮಾತನಾಡಿ ಕಡಿಮೆ ಬಂಡವಾಳದಲ್ಲಿ ಮೀನು ಕೃಷಿಯನ್ನು ಕೈಗೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಕಾಫಿ ಬೆಳೆಯ ಜೊತೆಗೆ ಮೀನು ಕೃಷಿಯನ್ನು ಉಪ ಕಸುಬಾಗಿ ಮಾಡಿಕೊಂಡಲ್ಲಿ ಆದಾಯಗಳಿಸುವತ್ತ ಮುನ್ನಡೆಯಬಹುದಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಮೀನುಕೃಷಿಗೆ ಸ್ಥಳೀಯ ಮಾರುಕಟ್ಟೆ ಸೌಲಭ್ಯವು ಸಹ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಮಿಲನ ಭರತ್ ಸಲಹೆ ಮಾಡಿದರು. ವಿಜ್ಞಾನಿ ಡಾ.ಶಿವಪ್ರಸಾದ್ ಅವರು ಮಾತನಾಡಿ ಕಾಫಿ ಬೆಳೆಗಾರರು ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ. ಕಾಫಿ ತೋಟಗಳಲ್ಲಿ ಇಂಗುಗುಂಡಿ ಮಾಡಿ ಕೃಷಿ ಪೋಷಕಾಂಶ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕೀಟ ಶಾಸ್ತ್ರಜ್ಞರಾದ ಡಾ.ಕೆಂಚಾರೆಡ್ಡಿ ಅವರು ಮಾತನಾಡಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಜೇನು ಕೃಷಿಯು ಸಹ ಒಂದು ಉದ್ಯಮವಾಗಿದ್ದು, ಕಾಫಿ ಜೊತೆಗೆ ಜೇನುಕೃಷಿಯಲ್ಲಿ ಕೈಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಕಾಫಿ ಸಾಧಕ ಕೃಷಿಕರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಕರಡದ ಬಿದಿರು ಕೃಷಿಯಲ್ಲಿ ಪ್ರಗತಿ ಸಾಧಿಸಿರುವ ನಿಖಿಲ್ ರಾಮಮೂರ್ತಿ, ಕೊಡಗು ಕಾಫಿ ಮಹಿಳಾ ಜಾಗೃತಿ ಸಂಘದ ಮಹಿಳಾ ಸಂಘಟನೆಗಾಗಿ ಪ್ರಶಸ್ತಿ, ಯಂತ್ರೋಪಕರಣಗಳ ತಯಾರಿಕೆಗಾಗಿ ವಿ.ಎ.ತಾಹಿರ್, ಜೇನುಕೃಷಿ ಸಾಧಕರಾದ ಶಿರಕಜೆ ಮಾದಪ್ಪ, ಮರಗೋಡು ಗ್ರಾಮದ ಕಟ್ಟೆಮನೆ ಪ್ರೇಮಗಣೇಶ್, ಕರಿಮೆಣಸು ಕೃಷಿಯಲ್ಲಿ ಸಾಧಕರಾದ ಎ.ಪಿ.ಸುಬ್ಬಯ್ಯ, ಭತ್ತ ಕೃಷಿಕರಾದ ದೊಡ್ಡಳ್ಳಿ ಗ್ರಾಮದ ಬಸವಣ್ಣಯ್ಯ ಮತ್ತು ಹುಲುಸೆ ಗ್ರಾಮದ ಎಚ್.ಪಿ.ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ವಿನೋದ್ ಮೂಡಗದ್ದೆ ನಿರೂಪಿಸಿದರು. ಕಾಫಿ ದಸರಾ ಸಂಘಟಕರಾದ ಅನಿಲ್ ಎಚ್.ಟಿ. ಸ್ವಾಗತಿಸಿ, ವಂದಿಸಿದರು.