ಸೋಮವಾರಪೇಟೆ NEWS DESK ಅ.7 : ನಿವೇಶನ ರಹಿತ ಕಾರ್ಮಿಕರಿಗೆ ಸರ್ಕಾರ ಉಚಿತ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿ.ಪಿ.ಐ) ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ, ಜೇಸಿ ವೇದಿಕೆಯಲ್ಲಿ ಧರಣಿ ನಡೆಸಲಾಯಿತು. ಕಕ್ಕೆಹೊಳೆ ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಕೂಲಿ ಕಾರ್ಮಿಕರ ಪರವಾಗಿ ಘೋಷಣೆ ಕೂಗಿದರು. ಜೇಸಿ ವೇದಿಕೆಗೆ ಆಗಮಿಸಿದ ಉಪ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಕೊಡಗಿನಾದ್ಯಂತ ಗುರುತು ಮಾಡಿರುವ ಸರ್ಕಾರಿ ಪೈಸಾರಿ ಜಾಗಗಳನ್ನು ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದಾರೆ. ಅಕ್ರಮ ಒತ್ತುವರಿಯನ್ನು ಸರ್ಕಾರ ತೆರವು ಮಾಡಿಸುವುದನ್ನು ಬಿಟ್ಟು, ಒತ್ತುವರಿ ಮಾಡಿಕೊಂಡವರಿಗೆ ಲೀಸ್‌ಗೆ ಕೊಡಲು ತಂತ್ರ ರೂಪಿಸುತ್ತಿದೆ ಎಂದು ಸಿ.ಪಿ.ಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಂ.ಸೋಮಪ್ಪ ಆರೋಪಿಸಿದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವ ಇನ್ನೂ ಬಡವನಾಗಿಯೇ ಉಳಿದಿದ್ದಾನೆ. ಸರ್ಕಾರವೂ ಎಲ್ಲರಿಗೂ ಸೂರು ಎಂದು ಭರವಸೆಗಳನ್ನು ಮಾತ್ರ ನೀಡುತ್ತಿದೆ. ಬಡ ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಿ ಭೂ ಮಾಲೀಕರಿಗೆ ಪೂರಕವಾದ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು. ಇನ್ನು ಮುಂದಾದರೂ ಜಿಲ್ಲೆಯ ಶಾಸಕರುಗಳು. ಜಿಲ್ಲಾಡಳಿತ ಮತ್ತು ಆಯಾ ತಾಲೂಕು ಆಡಳಿತಗಳು ಬಡವರಿಗೆ ಸೂರು ಕಲ್ಪಿಸಲು ಮುಂದಾಗಲಿ ಎಂದು ಒತ್ತಾಯಿಸಿದರು. ಕಳೆದ 22 ವರ್ಷಗಳ ಹಿಂದೆಯೇ ಸತತವಾಗಿ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಹಾಗು ಕಂದಾಯ ಇಲಾಖೆಗೆ ನಿವೇಶನ ರಹಿತರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ನಿವೇಶನ ನೀಡಬೇಕೆಂದು ಮನವಿ ಮಾಡಿದ್ದರೂ ಇದುವರೆಗೂ ಯಾರಿಂದಲೂ ಸ್ಫಂದನೆ ದೊರೆತಿಲ್ಲ. ದುಡಿಯುವ ವರ್ಗದವರ ಬೇಡಿಕೆಗಳನ್ನು ಯಾರೂ ಕೂಡ ಈಡೇರಿಸುತ್ತಿಲ್ಲ. ಕೇವಲ ಮತಬ್ಯಾಂಕ್ ವರ್ಗ ಎಂದು ಕಡೆಗಣಿಸುತ್ತಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್, ಸದಸ್ಯ ಧರ್ಮರಾಜು, ಜಿಲ್ಲಾ ಕಾರ್ಯದರ್ಶಿ ಸುನಿಲ್, ತಾಲ್ಲೂಕು ಕಾರ್ಯದರ್ಶಿ ಶಬಾನಾ ಇದ್ದರು.