ಮಡಿಕೇರಿ NEWS DESK ಅ.7 : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಉನ್ನತೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿ.ಪಂ ಕಚೇರಿ ಎದುರು ಒಕ್ಕೂಟದ ಪ್ರಮುಖರು ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಅಧಿಕಾರಿಗಳು ಹಾಗೂ ಪಿಡಿಒಗಳ ಮೇಲೆ ಆಗುತ್ತಿರುವ ಒತ್ತಡ ನಿಲ್ಲಬೇಕು, ಪಂಚಾಯತ್ ಕಾರ್ಯನಿರ್ವಹಣೆ ಕುರಿತು ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಬೇಕು, ತಾ.ಪಂ ಸಹಾಯಕ ನಿದೇಶಕರ ಹುದ್ದೆಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳ ಹುದ್ದೆ ಎಂದು ಪರಿಗಣಿಸಬೇಕು, ವೇತನ ಶ್ರೇಣಿಯಲ್ಲಿ ಆಗಿರುವ ತಾರತಮ್ಯವನ್ನು ತಕ್ಷಣ ಸರಿಪಡಿಸಬೇಕು, 15 ರಿಂದ 20 ವರ್ಷಗಳಿಂದ ಉಪಕಾರ್ಯದರ್ಶಿ ವೃಂದದಲ್ಲಿ ಸೇವೆ ಸಲ್ಲಿಸಿದವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಗೆ ಬಡ್ತಿ ನೀಡಬೇಕು, ಪಂಚಾಯತ್ ಆಡಳಿತ ಸೇವೆ ಜಾರಿಗೊಳಿಸಬೇಕು, ಎಲ್ಲಾ ಸಿಬ್ಬಂದಿಗಳಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು, ಡಿ.ಇ.ಒ ಆಗಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಅನುಮೋದನೆ ನೀಡಬೇಕು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು, ಪಿಡಿಒಗಳ ಹುದ್ದೆಯನ್ನು ಗ್ರೂಪ್ ಬಿ ಗೆ ಉನ್ನತೀಕರಿಸಬೇಕು, ಎಲ್ಲಾ ದ್ವಿತೀಯ ದರ್ಜೆ ಸಹಾಯಕರಿಗೆ ಬಡ್ತಿ ನೀಡಬೇಕು, ಗ್ರಾ.ಪಂ ಗಳಲ್ಲಿ ಬಳಸುತ್ತಿರುವ ಎಲ್ಲಾ ತಂತ್ರಾಂಶಗಳನ್ನು ಸರಳಿಕರಣಗೊಳಿಸಿ, ಸಂಬಂಧಿಸಿದ ಸಮಸ್ಯೆಗಳಿಗೆ ಏಕೀಕೃತ ಸಹಾಯವಾಣಿ ಜಾರಿ ಮಾಡಬೇಕು, ಪಂಚಾಯಿತಿಗೆ ಸಂಬಂಧಿಸಿದ ಸಮಸ್ಯೆಯನ್ನು ಕುಂದು ಕೊರತೆ ಪ್ರಾಧಿಕಾರದ ಮೂಲಕವೇ ಬಗೆಹರಿಸಬೇಕೆಂದು ಒತ್ತಾಯಿಸಿದರು. ಒಂದೇ ತಾಲ್ಲೂಕಿನಲ್ಲಿ 7 ವರ್ಷ ಸೇವೆ ಸಲ್ಲಿಸಿದ ಗ್ರಾ.ಪಂ ಅಧಿಕಾರಿ, ನೌಕರರ ವರ್ಗಾವಣೆ ಹಿಂಪಡೆಯಬೇಕು, ಗ್ರಾ.ಪಂ ಕಚೇರಿ ನಿರ್ವಹಣಾ ಕೈಪಿಡಿಯನ್ನು ರಚಿಸಬೇಕು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಬಡ್ತಿ ನೀಡಬೇಕು, ವರ್ಗಾವಣೆ ನೀತಿಯನ್ನು ಕೈಬಿಡಬೇಕು, ಜನಸಂಖ್ಯೆಗೆ ಅಗತ್ಯವಿರುವಷ್ಟು ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ನೀಡಬೇಕು, ಅವೈಜ್ಞಾನಿಕ ಆದೇಶವನ್ನು ನಿಲ್ಲಿಸಬೇಕು, ಗ್ರಾ.ಪಂ ನೌಕರರಿಗೆ ನ್ಯಾಯಯುತ ಸಂಬಳ ನೀಡಬೇಕು, ಎಲ್ಲಾ ನೌಕರರನ್ನು ಖಾಯಂಗೊಳಿಸಬೇಕು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು, ರಜಾ ದಿನಗಳಲ್ಲಿ ನೌಕರರಿಗೆ ಕೆಲಸ ನೀಡುವುದನ್ನು ತಪ್ಪಿಸಬೇಕು, ಇಂಧನ ಭತ್ಯೆ ನೀಡಬೇಕು, ಮರಣ ಹೊಂದಿದ್ದ ನೌಕರರಿಗೆ ರೂ.1 ಲಕ್ಷ ನೀಡಬೇಕು, 6 ವರ್ಷ ಸೇವೆ ಸಲ್ಲಿಸಿದವರಿಗೆ ಗ್ರೇಡ್-2 ಕಾರ್ಯದರ್ಶಿಗಳಿಗೆ ಎಸ್‌ಡಿಎಎ ಹುದ್ದೆ ನೀಡಬೇಕು ಎಂದು ಆಗ್ರಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಹೆಚ್.ಪಿ.ರವೀಶ್, ಪ್ರಮುಖರಾದ ಮಹೇಶ್ ತಿಮ್ಮಯ್ಯ, ನವೀನ್ ಅಜ್ಜಳ್ಳಿ, ವಿಶ್ವನಾಥ್, ವಿನೋದ, ಪ್ರಕಾಶ್, ದೇವರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಎಸ್‌ಡಿಎ, ಕರವಸೂಲಿಗಾರರು, ಕ್ಲರ್ಕ್ ಕಂ ಡಾಡಾ ಎಂಟ್ರಿ ಅಪರೇಟರ್, ಆಟೆಂಡರ್, ನೀರುಘಂಟಿಗಳು, ಸ್ವಚ್ಛತಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಿದರು.