ಮಡಿಕೇರಿ ಅ.8 NEWS DESK : ದಕ್ಷಿಣ ಭಾರತದ ಸುಮಾರು ಎಂಟು ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ತನ್ನ ತವರು ಜಿಲ್ಲೆ ಕೊಡಗಿನಲ್ಲೇ ನಿರ0ತರವಾಗಿ ಕಲುಷಿಗೊಳ್ಳುತ್ತಿದೆ. ನದಿ ಮಾಲಿನ್ಯವನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆ ವಿವಿಧ ಹಂತದ ಹೋರಾಟದೊಂದಿಗೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿರುವುದಾಗಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಕೊಡಗು ಮೋಡೆಲ್ ಫಾರೆಸ್ಟ್ ಟ್ರಸ್ಟ್ ನ ಉಪಾಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನದಿ ಮತ್ತು ಪರಿಸರ ಸ್ನೇಹಿ ಸಂಘಟನೆಗಳ ಸಹಕಾರದೊಂದಿಗೆ ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸುವುದಾಗಿ ಹೇಳಿದರು. ಕಾವೇರಿ ನದಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಸುಮಾರು 810 ಕಿ.ಲೋ ಮೀಟರ್ ಹರಿದು ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ. ದುರಾದೃಷ್ಟವಶಾತ್ ಭಾಗಮಂಡಲದಿಂದಲೇ ನದಿ ಕಲುಷಿತಗೊಳ್ಳುತ್ತಿದೆ. ತ್ಯಾಜ್ಯದ ನೀರು ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಸೇರ್ಪಡೆಗೊಳ್ಳುತ್ತಿದೆ. ಇದೇ ರೀತಿ ನಾಪೋಕ್ಲು, ಬೇತ್ರಿ, ಕೊಂಡಂಗೇರಿ, ನೆಲ್ಲಿಹುದಿಕೇರಿ, ಕರಡಿಗೋಡು, ಗುಡ್ಡೆಹೊಸೂರು, ಕುಶಾಲನಗರ, ಮಡಿಕೇರಿ ಮತ್ತು ವಿರಾಜಪೇಟೆ ಭಾಗದಲ್ಲಿ ಹೊಟೇಲ್, ಲಾಡ್ಜ್ ಮತ್ತು ಅಂಗಡಿಗಳ ತ್ಯಾಜ್ಯ ಸೇರ್ಪಡೆಗೊಂಡು ಕಾವೇರಿ ನದಿ ನೀರು ಮಲೀನವಾಗುತ್ತಿದೆ. ಇದರಿಂದ ಕಾವೇರಿ ನೀರಿನ ಗುಣಮಟ್ಟ ಕುಶಾಲನಗರ ಭಾಗದಲ್ಲಿ 2023 ರ ವರದಿ ಪ್ರಕಾರ “ಸಿ” ದರ್ಜೆಗೆ ತಲುಪಿದೆ. ಕುಡಿಯಲು ಕೂಡ ನದಿ ನೀರು ಯೋಗ್ಯವಲ್ಲ ಎನ್ನುವ ಮಾಹಿತಿ ದೊರೆತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸಿ.ಪಿ.ಮುತ್ತಣ್ಣ ಆರೋಪಿಸಿದರು. ಮಲೀಗೊಂಡಿರುವ ನದಿ ನೀರು ವನ್ಯಜೀವಿ ವಲಯ ಮತ್ತು ಮೀಸಲು ಅರಣ್ಯದ ಮೂಲಕ ಹರಿಯುತ್ತಿರುವುದರಿಂದ ಪ್ರಾಣಿಗಳು, ಸಸ್ಯವರ್ಗ ಮತ್ತು ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುಡುವ ಭೀತಿ ಇದೆ. ಮಡಿಕೇರಿ ನಗರಸಭೆಗೆ ಎಸ್.ಟಿ.ಪಿ ಯೋಜನೆಗೆ ಸರಕಾರ ಜಾಗ ಮಂಜೂರು ಮಾಡಿದ್ದರು ಇದುವರೆಗು ಕಾಮಗಾರಿ ಪ್ರಾರಂಭಗೊಂಡಿಲ್ಲ. ಯು.ಜಿ.ಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಸರಕಾರದ ಹಣ ಪೋಲು ಮಾಡಲಾಗಿದೆ. ಕುಶಾಲನಗರದಲ್ಲಿ ಯು.ಜಿ.ಡಿ ಮತ್ತು ಎಸ್.ಟಿ.ಪಿ ಯೋಜನೆಯು ಶೇ.70 ರಷ್ಟು ಮುಗಿದಿದ್ದರು ಉಳಿದ ಕಾಮಗಾರಿಯನ್ನು ನಡೆಸದೆ ಇರುವುದರಿಂದ ಕಾವೇರಿ ನದಿ ಮತ್ತಷ್ಟು ಮಲೀನವಾಗಬಹುದು ಎಂದರು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಮಾಡಲಾಗಿದೆ. ಗೋಣಿಕೊಪ್ಪವನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಲು ಸಿದ್ಧವಾಗಿದ್ದು, ಇದರಿಂದ ಗದ್ದೆಗಳು ಮತ್ತು ಬಾಣೆ ಜಾಗಗಳಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಜನಸಂಖ್ಯೆ ಹೆಚ್ಚಾಗಿ ಈ ಭಾಗದ ಲಕ್ಷ್ಮಣ ತೀರ್ಥ ನದಿ ಮಲೀನವಾಗುತ್ತದೆ. ಇದರಿಂದ ನಾಗರಹೊಳೆ ಅರಣ್ಯದ ಮೇಲು ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಎಸ್.ಟಿ.ಪಿ ಮತ್ತು ಯು.ಜಿ.ಡಿ ಯೋಜನೆಯನ್ನು ಗ್ರಾಮ ಪಂಚಾಯತ್ ವ್ಯಾಪ್ತಿಗೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಟ್ಟಡ ನಿರ್ಮಾಣ ಒತ್ತುವರಿ, ನದಿ ಮಾಲಿನ್ಯ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಎಲ್ಲಾ ವಿವರಗಳನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಸಲ್ಲಿಸುವ ವ್ಯವಸ್ಥೆಯಾದರೆ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಸಿರು ನ್ಯಾಯಾಪೀಠದ ಆದೇಶದಂತೆ ನದಿಯ ಬಫರ್ ಜೋನ್ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಬಫರ್ ಜೋನ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು, ರೆಸಾರ್ಟ್‍ಗಳು ನಿರ್ಮಾಣವಾಗಿವೆ. ಕುಶಾಲನಗರ ತಾಲೂಕಿನಲ್ಲಿ ದುಬಾರೆ, ನಿಸರ್ಗಧಾಮ, ಕುಶಾಲನಗರ ಪಟ್ಟಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ಉದ್ದೇಶಕ್ಕೆ ಬಫರ್ ಜೋನ್ ಕಾನೂನು ಬಾಹಿರ ಭೂ ಪರಿವರ್ತನೆ ಮಾಡಲಾಗಿದೆ. ಇವುಗಳಲ್ಲದೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾವೇರಿ ನದಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲಾಗುವುದು. ಕಾವೇರಿ ನದಿಯ ಪಾವಿತ್ರ್ಯತೆ ಮತ್ತು ಕೊಡಗನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟಕ್ಕೆ ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಸಿ.ಪಿ.ಮುತ್ತಣ್ಣ ತಿಳಿಸಿದರು. ವಿರಾಜಪೇಟೆ ನಾಗರಿಕಾ ಸೇವಾ ಸಮಿತಿಯ ಪ್ರಮುಖ ಡಾ.ಈ.ರಾ.ದುರ್ಗಾಪ್ರಸಾದ್ ಮಾತನಾಡಿ ವಿರಾಜಪೇಟೆ ಭಾಗದಲ್ಲಿ ನದಿ, ತೊರೆ, ಕೆರೆ, ತೋಡುಗಳು ಅಕ್ರಮವಾಗಿ ಒತ್ತುವರಿಗೊಂಡು ಬೃಹತ್ ಕಟ್ಟಡಗಳು ನಿರ್ಮಾಣಗೊಂಡಿವೆ. ಈ ಕಟ್ಟಡಗಳ ತ್ಯಾಜ್ಯಗಳು ನದಿಯನ್ನು ಸೇರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೇತ್ರಿ ಭಾಗದಲ್ಲಿ ಇದು ವ್ಯಾಪಕವಾಗಿದ್ದು, ಅಧಿಕಾರಿಗಳು ನದಿ ಸಂರಕ್ಷಣೆಗೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು. ತಕ್ಷಣ ಅಕ್ರಮ ಒತ್ತುವರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ತೆರವುಗೊಳಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಸೇವ್ ಕಾವೇರಿ ಸಂಘಟನೆಯ ಶರತ್ ಸೋಮಣ್ಣ, ಗೋಪಿನಾಥ್, ಮಾದೇಟಿರ ಕಾಳಯ್ಯ ಹಾಗೂ ಚೇಂದಂಡ ಮಿಥುನ್ ಪೊನ್ನಪ್ಪ ಉಪಸ್ಥಿತರಿದ್ದರು.