ಮಡಿಕೇರಿ ಅ.8 NEWS DESK : ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಅ.31 ರಿಂದ ನ.4ರ ವರೆಗೆ ಎರಡನೇ ವರ್ಷದ ಅಂತರ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಬಾಳಲೆಯಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಖಜಾಂಚಿ ಕೊಕ್ಕೆಂಗಡ ರಂಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳಲೆಯ ವಿಜಯಲಕ್ಷ್ಮಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಐದು ದಿನಗಳ ಕಾಲ ನಾಕೌಟ್ ಮಾದರಿಯ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದೆಂದರು. ಪಂದ್ಯಾವಳಿಯಲ್ಲಿ ಕೊಡವ ಜನಾಂಗದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸುಮಾರು 14 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಂದು ತಂಡಕ್ಕೆ ಎರಡು ಹೊರ ಜಿಲ್ಲೆಯ ಕೊಡವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಆಟಗಾರರು ಅ.20ರ ಒಳಗಾಗಿ ರೂ.5,000 ರೂಪಾಯಿಗಳನ್ನು ಪಾವತಿಸಿ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಟಗಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ತಂಡದ ನೊಂದಾಣಿಗಾಗಿ 9343856877, 9632085536, 9353304042 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದ್ದು, ಇದರಿಂದ ಜಿಲ್ಲೆಯ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ ವರ್ಷದಿಂದ ಲೆದರ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತ ಬರಲಾಗುತ್ತಿದೆ ಎಂದರು. ಕಳೆದ ವರ್ಷ ವಿರಾಜಪೇಟೆಯಲ್ಲಿ ಯಶಸ್ವಿಯಾಗಿ ಪಂದ್ಯಾವಳಿಯನ್ನು ನಡೆಸಲಾಗಿದ್ದು, ಸುಮಾರು 10 ತಂಡಗಳು ಭಾಗವಹಿಸಿದ್ದವು. ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಕಿಶನ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಎನ್.ಕಾರ್ಯಪ್ಪ, ಕಾರ್ಯದರ್ಶಿ ಕುಂದ್ರಂಡ ಬೋಪಣ್ಣ ಉಪಸ್ಥಿತರಿದ್ದರು.