ವಿರಾಜಪೇಟೆ ಅ.9 NEWS DESK : ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ 14 ವರ್ಷದೊಳಗಿನ ಬಾಲಕರ ತಂಡವು ಹಾಸನ ತಂಡವನ್ನು ಮಣಿಸಿ ವಿಜೇತಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ಶಾರದಾ ಶಾಲೆಯ ಮೈದಾನದಲ್ಲಿ ಆಯೋಜಿಸಿತು. ಪ್ರತಿ ತಂಡಕ್ಕೆ ಮೂರು ಸುತ್ತುಗಳ ಪಂದ್ಯ ನಡೆಯಿತು. ಮೊದಲ ಸುತ್ತಿನಲ್ಲಿ ಕೊಡಗು ತಂಡ ಮಂಡ್ಯ ಜಿಲ್ಲೆಯ ತಂಡವನ್ನು ಸೋಲಿಸಿ ಎರಡನೆ ಸುತ್ತಿಗೆ ಅರ್ಹತೆ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಎದುರಾಳಿ ಉಡುಪಿ ಜಿಲ್ಲಾ ತಂಡದೊಂದಿಗೆ ಆಡಿ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್ ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲಾ ತಂಡ ಮತ್ತು ಕೊಡಗು ಜಿಲ್ಲಾ ತಂಡದ ಮಧ್ಯೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಡಗು ಜಿಲ್ಲಾ ತಂಡವು 10 ಓವರ್‌ಗಳಲ್ಲಿ ತನ್ನ ಮೂರು ವಿಕೆಟ್ ಕಳೆದುಕೊಂಡು 145 ರನ್ ಪಡೆದುಕೊಂಡಿತು. ತಂಡದ ಪರವಾಗಿ ವೃತುನ್ 24 ಬಾಲ್ ನಲ್ಲಿ 70 ರನ್, ಯಶಸ್ಸ್ 16 ಬಾಲ್ ನಲ್ಲಿ 36 ರನ್ ಮತ್ತು ಸೋಮಣ್ಣ 17 ಬಾಲ್ ಗಳಲ್ಲಿ 16 ರನ್ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿದರು. ಒಟ್ಟು 32 ರನ್ ಗಳಿಂದ ಕೊಡಗು ಜಿಲ್ಲಾ ತಂಡ ಜಯಗಳಿಸಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ