ಮಡಿಕೇರಿ ಅ.16 NEWS DESK : ಕೊಡವ ಮಕ್ಕಡ ಕೂಟದ 97ನೇ ಪುಸ್ತಕ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ “ಶ್ರೀ ಕಾವೇರಿ ಸುಪ್ರಭಾತ” ಕೊಡವ, ಕನ್ನಡ ಕೃತಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡವ, ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಸುಪ್ರಭಾತ ಎಂಬ ಶಬ್ಧವೇ ಮನಸ್ಸಿಗೆ ಧನಾತ್ಮಕ ಭಾವನೆಯನ್ನು ತುಂಬುತ್ತದೆ. ಕಾವೇರಿ ಕುರಿತು ಕೃತಿ ರಚನೆ ದೇವರ ಕೆಲಸವಾಗಿದ್ದು, ಹಾಡಿನ ರೂಪದಲ್ಲಿರುವುದನ್ನು ಅಕ್ಷರ ರೂಪದಲ್ಲಿ ಹೊರತಲಾಗಿದೆ. ಇದನ್ನು ಮಕ್ಕಳು ಸುಲಭವಾಗಿ ಕಲಿಯಬಹುದು ಮತ್ತು ಪ್ರತಿಯೊಬ್ಬರಿಗೂ ಕಾವೇರಿಮಾತೆಯ ಹಿನ್ನೆಲೆಯನ್ನು ತಿಳಿಯಲು ಸಹಕಾರಿಯಾಗಲಿದೆ ಎಂದರು. ಬರೆಯುವುದು ಸುಲಭ, ಅದನ್ನು ಪುಸ್ತಕ ರೂಪದಲ್ಲಿ ಹೊರತರುವುದು ಸುಲಭದ ಮಾತಲ್ಲ. ಆದರೆ ಕೊಡವ ಮಕ್ಕಡ ಕೂಟ ಬರೆಯುವವರಿಗೆ ಪ್ರೋತ್ಸಾಹ ನೀಡುವ ಮೂಲಕ ವಿವಿಧ ಭಾಷೆಗಳ ಹಲವು ಪುಸ್ತಕಗಳನ್ನು ಹೊರತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಹೊರತರಲಿ ಎಂದು ಹೇಳಿದರು. “ಶ್ರೀ ಕಾವೇರಿ ಸುಪ್ರಭಾತ” ಪುಸ್ತಕವನ್ನು ರಚಿಸಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ, ನಮ್ಮ ದೇಶದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ಕೇವಲ ಒಂದು ನದಿಯಲ್ಲ. ಅದು ಪ್ರತ್ಯಕ್ಷವಾದ ಜಲದೇವತೆ, ಆ ಪವಿತ್ರ ದೇವಿಯ ಮಹಿಮೆಯನ್ನು ಹಾಡಿನ ಮೂಲಕ ವರ್ಣಿಸಲಾಗುತ್ತಿತ್ತು. ಇದೀಗ ಅದಕ್ಕೆ ಅಕ್ಷರ ರೂಪ ನೀಡಲಾಗಿದೆ ಎಂದರು. “ಶ್ರೀ ಕಾವೇರಿ ಸುಪ್ರಭಾತ” ಪುಸ್ತಕವು ಕೊಡವ ಹಾಗೂ ಕನ್ನಡ ಅನುವಾದ ಪುಸ್ತಕವಾಗಿದ್ದು, 2004 ರಲ್ಲಿ ಸಿ.ಡಿ ರೂಪದಲ್ಲಿ ಈ ಸುಪ್ರಭಾತವನ್ನು ರವೀಂದ್ರ ಕೆ.ಸುಬ್ರಹ್ಮಣ್ಯ ಹೊರತಂದಿದ್ದರು. ನಂತರದ ದಿನಗಳಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ಹೊರತರಬೇಕೆಂಬ ಆಶಯ ನಮ್ಮದಾಗಿತ್ತು. ಇದೀಗ ಕೊಡವ ಮಕ್ಕಡ ಕೂಟದ ಸಹಕಾರದೊಂದಿಗೆ ಪುಸ್ತಕವನ್ನು ಹೊರತರಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮೂಲ ಪ್ರತಿಯನ್ನು ಕೊಡವ ಭಾಷೆಯಲ್ಲಿ ಬರೆಯಲಾಗಿದ್ದು, ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಇದು 45 ಚರಣಗಳನ್ನು ಒಳಗೊಂಡಿದ್ದು, ಕಾವೇರಿ ತುಲಾ ಸಂಕ್ರಮಣದ ದಿನವಾದ ಅ.17 ರಂದು ತಲಕಾವೇರಿಯಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಜನರ ಅಪೇಕ್ಷೆ ಮೇರೆಗೆ ಮತ್ತಷ್ಟು ಪುಸ್ತಕಗಳು ಮರು ಮುದ್ರಣವಾಗಲಿದೆ ಎಂದರು. ಸಾಹಿತ್ಯ ಕ್ಷೇತ್ರ ಮತ್ತು ಬರಹಗಾರರಿಗೆ ಕೊಡವ ಮಕ್ಕಡ ಕೂಟ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದು ನಾಗೇಶ್ ಕಾಲೂರು ಹೇಳಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕನ್ನಡಿಗರಿಗೆ ಓದಲು ಸಹಕಾರಿಯಾಗುವ ನಿಟ್ಟಿನಲ್ಲಿ “ಶ್ರೀ ಕಾವೇರಿ ಸುಪ್ರಭಾತ” ಪುಸ್ತಕವವನ್ನು ಕನ್ನಡದಲ್ಲೂ ಅನುವಾದ ಮಾಡಲಾಗಿದ್ದು, ಒಟ್ಟು 500 ಪ್ರತಿಗಳನ್ನು ಮುದ್ರಣ ಮಾಡಲಾಗಿದೆ. ಅವುಗಳಲ್ಲಿ 250 ಪುಸ್ತಕವನ್ನು ತಲಕಾವೇರಿಯಲ್ಲಿ ವಿತರಿಸಲಾಗುವುದು, ಮತ್ತಷ್ಟು ಪುಸ್ತಕದ ಅಗತ್ಯವಿದ್ದಲ್ಲಿ ಮುದ್ರಿಸಲಾಗುವುದೆಂದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 96 ಕೃತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ 97ನೇ ಪುಸ್ತಕವನ್ನು ಬಿಡುಗಡೆಗೊಳಿಸಿದೆ. ನಾಲ್ಕು ಪುಸ್ತಕಗಳು ತಯಾರಿ ಹಂತದಲ್ಲಿದ್ದು, ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಹೇಳಿದರು. ಅಂತರಾಷ್ಟ್ರೀಯ ಹಿರಿಯ ಶೆಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಮಾತನಾಡಿ, ಕಾವೇರಿ ತುಲಾ ಸಂಕ್ರಮಣದ ಸಂದರ್ಭ ಈ ಪುಸ್ತಕವನ್ನು ಹೊರತಂದಿರುವುದು ಶ್ಲಾಘನೀಯ. ಇದು ಕೊಡಗಿನ ಪ್ರತಿಯೊಬ್ಬರ ಮನೆಗಳಲ್ಲಿ ಇಡಲೇಬೇಕಾದ ಪುಸ್ತಕವಾಗಿದ್ದು, ಎಲ್ಲರೂ ಓದುವಂತಾಗಬೇಕು. ಆ ಮೂಲಕ ಕಾವೇರಿಯ ಇತಿಹಾಸವನ್ನು ತಿಳಿದುಕೊಳ್ಳುವಂತ್ತಾಗಬೇಕು ಎಂದು ಸಲಹೆ ನೀಡಿದರು. ಕೊಡವ ಮಕ್ಕಡ ಕೂಟ ಪುಸ್ತಕ ಬಿಡುಗಡೆ ಮಾಡುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಸಾಹಿತ್ಯಾಭಿಮಾನಿಗಳು ಆರ್ಥಿಕ ಸಹಕಾರ ನೀಡುವ ಮೂಲಕ ಬರಹಗಾರರಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು. ವಕೀಲರಾದ ಕನ್ನಂಡ ನಳಿನಿ ಪೊನ್ನಪ್ಪ ಅವರು ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ಪ್ರತಿಯೊಬ್ಬರು ಪುಸ್ತಕ ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಕೊಡವ ಮಕ್ಕಡ ಕೂಟದಿಂದ ಮತ್ತಷ್ಟು ಪುಸ್ತಕಗಳು ಹೊರಬರಲಿ ಎಂದು ಶುಭ ಹಾರೈಸಿದರು. ಸಮಾಜ ಸೇವಕರಾದ ತೆನ್ನಿರ ಗಿರಿ ಚಂಗಪ್ಪ ಉಪಸ್ಥಿತರಿದ್ದರು.
:: ಪರಿಚಯ ::
ನಾಗೇಶ್ ಕಾಲೂರು :: ಕನ್ನಡ, ಕೊಡವ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಇವರ ಕತೆ, ಕವನ, ವೈಚಾರಿಕ ಬರಹ, ನಾಟಕ, ಕಾದಂಬರಿ ಹೀಗೆ ಬೇರೆ ಬೇರೆ ಪ್ರಕಾರದ ಕೃಷಿ ಮಾಡುತ್ತಿದ್ದಾರೆ. ಕೊಡವ ಭಾಷೆಯಲ್ಲಿ “ಶ್ರೀ ಭಗವದ್ಗೀತಾ ದರ್ಶನ” (ಕಾವ್ಯ), ಕಾವೇರಿ ಸುಪ್ರಭಾತ, ಇಗ್ಗುತ್ತಪ್ಪ ಸುಪ್ರಭಾತ ಸೇರಿದಂತೆ ಹಲವು ಹಾಡುಗಳ ಸಿ.ಡಿ., ಕವನ ಸಂಕಲನ ಮಡಿಕೇರಿ ಆಕಾಶವಾಣಿಯಲ್ಲಿ ವಿವಿಧ ಕಾರ್ಯಕ್ರಮವನ್ನು ನೀಡಿದ್ದಾರೆ. ಲಘು ಶೈಲಿಯ ಭಾಷಣ, ರೇಡಿಯೋ ನಾಟಕ ಪ್ರಸಾರವಾಗಿದೆ. ಇವರ “ಪಳಮೆ ಪೊಮ್ಮಲೆ” ಸಣ್ಣ ನಾಟಕ ಜೊಪ್ಪೆಯಲ್ಲಿ 145 ಸಣ್ಣ ನಾಟಕ ಪ್ರಸಾರವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕನ್ನಡದಲ್ಲಿ “ಕೊಡವ ಭಾಷಿಕ ಜನಾಂಗಗಳ ಸಾಂಸ್ಕೃತಿಕ ಬದುಕು” ಎನ್ನುವ ಸಂಶೋಧನಾ ಗ್ರಂಥ. “ಶ್ರೀ ಕಾವೇರಿ ದರ್ಶನಂ” ಎನ್ನುವ ಮಾಕಾವ್ಯ ಎನ್ನುವ ಎರಡು ಕವನ ಸಂಕಲನ, ಒಂದು ಕಥಾ ಸಂಕಲನ, ಅನುವಾದ ಸಾಹಿತ್ಯ ಲೋಕಾರ್ಪಣೆಗೊಂಡಿದೆ. ಇವರು ಮಡಿಕೇರಿ ಆಕಾಶವಾಣಿಯಲ್ಲಿ ವಾರ್ತಾ ವಾಚಕರಾಗಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಐದನೇ ಮಡಿಕೇರಿ ತಾಲ್ಲೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಅಧ್ಯಯನ ಪೀಠದ ಸದಸ್ಯರಾಗಿ, ಕೊಡವ ಪಠ್ಯ ಪುಸ್ತಕ ರಚನೆಕಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ “ಕೊಡವ ಜಯಭಾರತ” ಕಾವ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಗೌರವ ರಾಜ್ಯ ಪ್ರಶಸ್ತಿ, ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಪುರಸ್ಕಾರ, ಕೊಡಗು ಜಿಲ್ಲಾಡಳಿತ ರಾಜ್ಯೋತ್ಸವ ಪುರಸ್ಕಾರ, ಅಲ್ಲದೇ ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಸನ್ಮಾನ, ಪುರಸ್ಕಾರ ನೀಡಲಾಗಿದೆ. ಪತ್ನಿ ಶಚಿದೇವಿ, ಮಗಳು ಪ್ರೀತಿ, ಮಗ ಸಂತೋಷ್, ಸೊಸೆ ವಿದ್ಯಾಲಕ್ಷ್ಮಿ, ಮೊಮ್ಮಗ ಶ್ರೀವರ್ಧನ್ ಅವರೊಂದಿಗೆ ಕಡಗದಾಳು ಗ್ರಾಮದಲ್ಲಿ ಇವರು ವಾಸವಿದ್ದಾರೆ.