ವಿರಾಜಪೇಟೆ ಅ.16 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಡಾ. ಬಿದ್ದಂಡ ಚಂಗಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಯಾವುದೇ ಕಾರ್ಯ ಯಶಸ್ವಿಯಾಗ ಬೇಕಾದರೆ ಅದರ ಹಿಂದೆ ನಿರಂತರವಾದ ಕಠಿಣ ಪರಿಶ್ರಮ ಇರಬೇಕು. ನಾವುಗಳಿಸುವ ಯಶಸ್ಸು ಇತರರಿಗೆ ಸದಾ ಮಾರ್ಗದರ್ಶಿ ಆಗಬೇಕೆ ಹೊರತು ಇತರರೊಂದಿಗೆ ಎಂದಿಗೂ ಹೋಲಿಕೆ ಮಾಡುವ ಕೆಲಸ ಮಾಡ ಬಾರದು.ಹೇಗೆ ಮಾಡಬೇಕು, ಏನು ಮಾಡಬೇಕು ಹಾಗೂ ಎಲ್ಲಿ ಮಾಡಬೇಕೆಂಬುದನ್ನು ತಿಳಿದರೆ ಜೀವನದಲ್ಲಿ ಎಲ್ಲಾ ವಿಚಾರಗಳನ್ನು ಕಲಿತು ಯಶಸ್ಸಿನ ಕಡೆಗೆ ಸಾಗಬಹುದು. ಜೀವನದಲ್ಲಿ ನಿರಂತರ ಕಲಿಕೆ ನಡೆಯುತ್ತಿರಬೇಕು ಕಲಿಕೆ ನಿಂತರೆ ಜೀವನ ನಿಂತಂತೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಸಮಯದ ನಿರ್ವಹಣೆಯು ಬಹಳ ಮುಖ್ಯವಾದದ್ದು. ಸಮಯದ ಸದ್ಬಳಕೆಯನ್ನು ಮಾಡಿಕೊಂಡು ಸಮಯದೊಂದಿಗೆ ಮುನ್ನಡೆಯುವುದನ್ನು ಕಲಿಯಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದು, ದೂರದರ್ಶನಗಳಲ್ಲಿ ನ್ಯೂಸ್ ಗಳನ್ನು ನೋಡುವುದರ ಮೂಲಕ ಒಂದಷ್ಟು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದಲ್ಲಾಗಲಿ, ಕುಟುಂಬದಲ್ಲಾಗಲಿ ಜನರೊಂದಿಗೆ ಬೆರೆಯುವುದನ್ನು ಕಲಿಯಬೇಕು. ಪ್ರತಿಯೊಬ್ಬರನ್ನು ಪ್ರೀತಿ ಗೌರವದಿಂದ ಕಂಡಾಗ ನಾವು ಯಾವುದೇ ಕಾರ್ಯವನ್ನು ಮಾಡಿದರು ಅದರಲ್ಲಿ ಏಳಿಗೆಯನ್ನು ಕಾಣಬಹುದೆಂದರು. ಇದೇ ಸಂದರ್ಭ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ, ನಾಮಫಲಕವನ್ನು ವಿತರಿಸಿದರು. ಕಾವೇರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ. ಇಟ್ಟೀರ ಬಿದ್ದಪ್ಪ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಇರುವಂತಹ ಪ್ರತಿಭೆಗಳನ್ನು ಗುರುತಿಸಿ ಅವರ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಒಬ್ಬ ವಿದ್ಯಾರ್ಥಿಯನ್ನು ಪ್ರತಿಭಾವಂತ ನಾಗರಿಕನಾಗಿ ಸಮಾಜಕ್ಕೆ ನೀಡಲು ವಿದ್ಯೆ ಮುಖ್ಯ. ವಿದ್ಯೆ ಅರ್ಹತೆಯನ್ನು ಮೌಲ್ಯವಾಗಿ, ಜ್ಞಾನವನ್ನು ಕೌಶಲ್ಯವಾಗಿ, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವ ಶಕ್ತಿಯಾಗಿದೆ. ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ನಮ್ಮ ಬದುಕು ಹಸನಾಗಲು ಸಾಧ್ಯ. ನಾವು ಕಲಿತ ವಿದ್ಯೆ ನಮ್ಮ ಯಶಸ್ಸಿಗೆ ಕಾರಣವಾಗಬೇಕು. ದುರ್ವ್ಯಸನ, ದುರಭ್ಯಾಸದಿಂದ ದೂರವಿದ್ದು ವಿದ್ಯಾರ್ಥಿಗಳು ಮೌಲ್ಯಯುತವಾದ ಸಂಸ್ಕಾರಮಯವಾದಂತಹ ಜೀವನವನ್ನು ನಡೆಸಬೇಕು. ಗುರು ಹಿರಿಯರಿಗೆ, ಮಾತಾಪಿತರಿಗೆ, ಸಮಾಜಕ್ಕೆ ಸದಾ ಋಣಿಯಾಗಿರಬೇಕು. ವಿದ್ಯಾರ್ಥಿಯಾದವನು ಅಧ್ಯಯನ ಶೀಲ, ಕ್ರಿಯಾಶೀಲ, ಆವಿಷ್ಕಾರ ಶೀಲ, ಚಾರಿತ್ಯವಂತ ಹಾಗೂ ಸಮಾಜಕ್ಕೆ ಕುಟುಂಬಕ್ಕೆ ಉತ್ತಮ ಕೊಡುಗೆ ಕೊಡುವ ಮನೋಭಾವವನ್ನು ಹೊಂದಿರಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಲ್ದಾನ, ಐಕ್ಯೂಎಸಿ ಸಂಚಾಲಕಿ ಪ್ರಿಯ, ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಚಾಲಕರಾದ ನಾಗರಾಜು, ಉಪನ್ಯಾಸಕರಾದ ವೀಣಾ ಹಾಗೂ ವಿದ್ಯಾರ್ಥಿ ನಾಯಕರುಗಳು ವೇದಿಕೆ ಮೇಲೆ ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ಮುಖ್ಯ ಅತಿಥಿಗಳಿಗೆ ಕಾಲೇಜಿನ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧನೆಯನ್ನು ಮಾಡಿದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. 2024 – 25 ನೇ ಸಾಲಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷನಾಗಿ ಮುತ್ತಣ್ಣ ಕೆ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪಿ, ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ಯಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೋನಿ ಎಂ.ಪಿ., ಜಂಟಿ ಕಾರ್ಯದರ್ಶಿಗಳಾಗಿ ನಿರೂಪ್ ನಾಣಯ್ಯ ಹಾಗೂ ರಕ್ಷಿತಾ ಬಿ.ಎಸ್. ಪ್ರತಿಜ್ಞಾ ವಿಧಿ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ವಿದ್ಯಾರ್ಥಿಗಳಿಂದ ಮನಮೋಹಕವಾದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು.