
ಮಡಿಕೇರಿ NEWS DESK ಅ.20 : ಕೊಡಗು ಜಿಲ್ಲಾ ವ್ಯಾಪಿ ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿಯನ್ನು ದುರುಪಯೋಗಪಡಿಸಿಕೊಂಡು ನಡೆಸುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಅ.23ರಂದು ಬೆಳಿಗ್ಗೆ 10.30 ಗಂಟೆಗೆ ಭಾಗಮಂಡಲದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆ ವ್ಯಾಪಕವಾಗಿ ದುರುಪಯೋಗವಾಗುತ್ತಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಬರುವ ಪೇರೂರು ಬಲ್ಲಮಾವಟಿ ಪ್ರದೇಶದಲ್ಲಿ ಕಾವೇರಿಯ ಉಪನದಿ “ಕಪ್ಪೊಳೆಯ” ಜಲಮೂಲವನ್ನು ಧ್ವಂಸಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಕಾವೇರಿಯ ಪುಣ್ಯ ಸ್ಥಳವು ಸುಪ್ರಸಿದ್ಧ ತೀರ್ಥಯಾತ್ರ ಕ್ಷೇತ್ರವಾಗಿದ್ದು, ಇದು ಪ್ರವಾಸಿತಾಣವಾಗುವ ಬದಲು ಆಧ್ಯಾತ್ಮಿಕ, ಪಾರಮಾರ್ಥಿಕ ನೆಲೆಯಾಗಿ ಉಳಿದು ಮುಂದುವರೆಯಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ದುರ್ಬಳಕೆಯಾಗದಂತೆ ಸಾತ್ವಿಕ ಪ್ರತಿರೋಧವನ್ನು ಸಿಎನ್‌ಸಿ ಒಡ್ಡುತ್ತಾ ಬಂದಿದೆ. ಇದರ ಭಾಗವಾಗಿ ಬುಧವಾರ ಭಾಗಮಂಡಲದಲ್ಲಿ ಸಿಎನ್‌ಸಿಯಿಂದ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ. ಟೌನ್‌ಶಿಪ್, ವಿಲ್ಲಾ ಮತ್ತು ರೆಸಾರ್ಟ್ ಗಳ ಮೂಲಕ ಕೊಡವ ಲ್ಯಾಂಡ್‌ನ ಪಾವಿತ್ರತೆಯನ್ನು ಮಲೀನ ಮಾಡಿ ಜಲಮೂಲ ಬಸಿದು, ಭೂಗರ್ಭ ಸೀಳಿ ರಮಣೀಯ ನಿಸರ್ಗ, ಮನಮೋಹಕ ಪರ್ವತ ಶ್ರೇಣಿಗಳನ್ನು ನಾಶ ಮಾಡಲಾಗುತ್ತಿದೆ. ಕರಾಳ ಭೂಸುಧಾರಣಾ ಕಾಯ್ದೆ ಅಡಿಯಲ್ಲಿ ಹೊರ ರಾಜ್ಯ ಹೊರದೇಶದ ಉದ್ಯಮಪತಿಗಳು ಎಗ್ಗಿಲ್ಲದೆ ಕೊಡವ ಲ್ಯಾಂಡ್‌ನಲ್ಲಿ ಭೂ ಕಬ್ಜದಲ್ಲಿ ತೊಡಗಿದ್ದಾರೆ. ಹೊರ ರಾಜ್ಯದ ಹಾಗೂ ಶತ್ರು ರಾಷ್ಟ್ರದ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆದು ಭೂರಹಿತ ಶೋಷಿತರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅಕ್ರಮ-ಸಕ್ರಮ ಮತ್ತು ಆಶ್ರಯ ಯೋಜನೆಯ ಫಲಾನುಭವಿಗಳಾಗಿ ಇಲ್ಲಿನ ಜನಸಂಖ್ಯಾ ಶಾಸ್ತ್ರದ ಪಲ್ಲಟಕ್ಕೆ ಕಾರಣವಾಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಮೂಲಕ ಸಾಮಾಜಿಕ ಸ್ವಾಸ್ಥö್ಯವನ್ನು ಹಾಳುಗೆಡುವುತ್ತಿದ್ದಾರೆ. ಇವರಿಗೆ ಭ್ರಷ್ಟ ಅಧಿಕಾರಶಾಯಿ ಹಾಗೂ ರಾಜಕೀಯ ಸಂಕುಲಗಳ ಬೆಂಬಲವಿದೆ. ಕೊಡವರ ಸ್ವಾಧೀನದಲ್ಲಿರುವ ಯುಗ ಯುಗಗಳ ಭೂಮಿಯನ್ನು ಕೊಡವರಿಗೆ 30 ವರ್ಷಗಳ ಗುತ್ತಿಗೆಗೆ ನೀಡುವ ಸರ್ಕಾರದ ಯೋಜನೆಯನ್ನು ವಿಫಲಗೊಳಿಸಲು ಯತ್ನಿಸುವ ಮೂಲಕ ದುಷ್ಟಕೂಟ ಕೊಡವರನ್ನು ಸಂಕಷ್ಟ ಮತ್ತು ಆತಂಕಕ್ಕೆ ತಳ್ಳುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಭಾಗಮಂಡಲದಲ್ಲಿ ನಡೆಯುವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.









