ಮಡಿಕೇರಿ ಅ.22 NEWS DESK : ಮತ್ತೊಂದು ದಸರಾ ಮುಗಿದಿದೆ. ವರ್ಷದಿಂದ ವರ್ಷಕ್ಕೆ ದಸರಾ ಬೆಳೆಯುತಿದೆ. ನಾನು ಕಳೆದ ಸರಿ ಸುಮಾರು 30 ವರ್ಷದಿಂದ ಬಹಳ ಸಮೀಪದಿಂದ ನೋಡಿದ್ದೇನೆ. ಹಲವಾರು ಉಪಸಮಿತಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಅಂದು ಸರ್ಕಾರದ ಅನುದಾನವಿಲ್ಲದೆ ಸಂಪನ್ಮೂಲ ಕ್ರೋಡಿಕರಿಸಿ ಕೆಲವೇ ಲಕ್ಷದಿಂದ ನಡೆಯುತ್ತಿದ್ದ ದಸರಾ ಇಂದು ಸರ್ಕಾರದ ಅನುದಾನ ಕೋಟಿ ದಾಟಿದೆ. ಹಳೆ ಖಾಸಗಿ ಬಸ್ ನಿಲ್ದಾಣದಿಂದ ಗಾಂಧಿಮೈದಾನದವರೆಗೆ ಬೆಳವಣಿಗೆ ಕಂಡ ದಸರಾ, ಕಾವೇರಿ ಕಲಾಕ್ಷೇತ್ರದಿಂದ ಇಂದು ಗಾಂಧಿಮೈದಾನದ ಬೃಹತ್ ವೇದಿಕೆಗೆ. ಪಲ್ಲಕಿಯಿಂದ ಆರಂಭವಾದ ಶೋಭಾಯಾತ್ರೆ ದೇವಾಲೋಕ ಬಿಂಬಿಸುವ ರೀತಿಯಲ್ಲಿ ಇಂದು ಬಂದು ನಿಂತಿದೆತೆಂದರೇ ಇದರ ಹಿಂದೆ ಬಹಳಷ್ಟು ಹಿರಿಯರ ಪರಿಶ್ರಮ, ಸಮಯದ ತ್ಯಾಗವಿದೆ. ಜನ ಅವರ ಪರಿಶ್ರಮವನ್ನು ಗುರುತಿಸಿದ್ದಾರೆ. ಆದರೆ ದಸರಾ ಸಮಿತಿಯ ಕಾರ್ಯಕ್ರಮದ ಬಗ್ಗೆ ಮಡಿಕೇರಿಯ ನಾಗರಿಕರಿಗೆ ಅಸಮಾಧಾನವಿದೆ. “ದಸರಾ ಅಂದು ದೇವತಕಾರ್ಯ ಇಂದು ರಾಜಕೀಯ ಮೇಲಾಟ'” ಎಂಬ ಶಿರೋನಾಮೆಯಡಿಯಲ್ಲಿ 5 ವರ್ಷದ ಹಿಂದೆ ಒಂದು ಲೇಖನ ಬರೆದು ಜನರಿಗೆ ಅನುಕೂಲವಾಗುವಂತೆ ಅನೇಕ ಸಲಹೆ ನೀಡಿದೆ. ಅದರಲ್ಲಿ ಸಭಾ ಕಾರ್ಯಕ್ರಮ ಗಾಂಧಿಮೈದಾನದಲ್ಲಿ ನಡೆಸುವುದರಿಂದ ಆಗುವ ತೊಂದರೆ ಕಾರಣವೆಂದರೆ ರಜೆ ಸಮಯವಾದ್ದರಿಂದ ಪ್ರವಾಸಿಗರು ಹೆಚ್ಚು ಇರುವುದರಿಂದ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಮತ್ತು ಕಾರ್ಯಕ್ರಮಕ್ಕೆ ಗಣ್ಯರು ಬರುವಾಗ ಆಗುವ ಕಿರಿ ಕಿರಿಯನ್ನು ತಪ್ಪಿಸಲು ವೇದಿಕೆ ಕಾರ್ಯಕ್ರಮಕ್ಕೆ ಪರ್ಯಾಯ ಜಾಗ ಗುರುತಿಸಿ ಇದರಿಂದ ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾರ್ಯಕ್ಕೂ ಸುಲಭವಾಗುತ್ತೆ. ಮಡಿಕೇರಿ ನಾಗರಿಕರಿಗೆ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಿ ಕೊಡಿ. ಅದೇ ರೀತಿ ದಿನ ಸಭಾ ಕಾರ್ಯಕ್ರಮ ನಡೆಸುವುದರಿಂದ ಕಲಾವಿದರಿಗೆ ಅದರಲ್ಲೂ ಸಣ್ಣ ಮಕ್ಕಳು ಹಾಗೂ ಅವರ ಪೋಷಕರು ಅನುಭವಿಸುವ ನರಕಯಾತನೆ ತಪ್ಪಿಸಲು ದಿನ ನಡೆಸುವ ಸಭಾ ಕಾರ್ಯಕ್ರಮದ ಬದಲು ಮೊದಲ ಮತ್ತು ಕೊನೆ ದಿನ ಸಭಾ ಕಾರ್ಯಕ್ರಮ ನಡೆಸಿರಿ. ಅದೇ ರೀತಿ ದಸರಾ ಹಬ್ಬದ ದಿನದಂದು ನಡೆಯುವ ಶೋಭಾಯಾತ್ರೆಯು ಒಂದು ಇಡೀ ರಾತ್ರಿ ದೇವಲೋಕವನ್ನು ಸೃಷ್ಟಿ ಮಾಡುತ್ತದೆ ಅಂದರೆ ಉತ್ಪ್ರೇಕ್ಷೆ ಆಗದು. ಅದಕ್ಕಾಗಿ ನೂರಾರು ಜನರ ತಿಂಗಳ ಪರಿಶ್ರಮವಿದೆ. ಅವರ ಕಲೆಗೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಮಂಟಪಗಳನ್ನು ನಿರ್ಮಾಣ ಮಾಡುವಾಗ ಮಡಿಕೇರಿ ನಗರದ ರಸ್ತೆಗಳ ಮತ್ತು ಸೇರುವ ಜನರ ಪರಿಕಲ್ಪನೆ ಇದ್ದರೂ ಅವೈಜ್ಞಾನಿಕವಾಗಿ ಮಂಟಪ ನಿರ್ಮಾಣದಿಂದ ಪೊಲೀಸ್ ಠಾಣೆಯಿಂದ ನಗರ ಸಭೆಯವರೆಗೂ ಪ್ರತಿ ವರ್ಷ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಾಟಿ ಚಾರ್ಜ್ ಮಾಡಿದ ಪ್ರಸಂಗ ಪ್ರತಿ ವರ್ಷದಂತೆ ಈ ವರ್ಷವು ನಡೆಯಿತು. ಅದಕ್ಕೆ ಸಾಕ್ಷಿ ಮಾರನೇ ದಿನ ರಸ್ತೆಯಲ್ಲಿ ಬಿದ್ದ ಚಪ್ಪಲಿಗಳೇ. ಕೆಲವು ವರ್ಷ ಹಿಂದೆ ನಡೆದ ಘಟನೆಯಿಂದ 3 ರಿಂದ 4 ಟ್ರ್ಯಾಕ್ಟರ್‍ನಿಂದ 2 ಕ್ಕೆ ಬಂದು ನಿಂತರೂ 2 ಟ್ರ್ಯಾಕ್ಟರ್‍ನ್ನು 4 ಟ್ರ್ಯಾಕ್ಟರ್ ಮಾಡುವ ಮಂಟಪ ಸಮಿತಿಗೇ ಮಡಿಕೇರಿ ಜನರಿಗೆ ದಸರಾ ಮಾಡಬೇಕು ಎಂಬುದು ಮರೆತೇ ಹೋಗಿದೆ. ಮಡಿಕೇರಿ ದಸರಾ ಇಂದು ದೇವತಾ ಕಾರ್ಯವಾಗಿ ಉಳಿದಿಲ್ಲ. ಅದು ರಾಜಕೀಯ ಮೇಲಾಟವಾಗಿ ಪರಿವರ್ತನೆ ಆಗಿದೆ ಎಂಬುದು ನಗ್ನ ಸತ್ಯ. ಯಾವ ಪಕ್ಷದ ಶಾಸಕರು ಮತ್ತು ಯಾವ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೆ ಆ ಪಕ್ಷದ ಕಾರ್ಯಕರ್ತರಿಗೇ ಒಂದು ವೇದಿಕೆ ಹೊರತು ಯಾರಿಗೂ ದಸರಾಕ್ಕೆ ಒಂದು ರೂಪು ರೇಖೆ ಮಾಡಬೇಕು ಎಂಬ ಮನೋಭಾವನೆ ಇಲ್ಲ ಎಂಬುದು ಜಗತ್‍ಜಹಿರ. ದಸರಾ ಮುಗಿದ ಮಾರನೇ ದಿನದಿಂದ ಯಾರ ಪತ್ತೆನೇ ಇರುವುದಿಲ್ಲ. ಮುಂದಿನ ದಸರಾ ಮೀಟಿಂಗ್‍ವರೆಗೂ. ಸದ್ಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವೊಂದು ವ್ಯವಸ್ಥಿತವಾಗಿ ನಡೆಯುತ್ತಾ ಇದೆ. ಅದಕ್ಕೆ ಈ ಹಿಂದೆ ಅನೇಕ ವರ್ಷ ಅಧ್ಯಕ್ಷರಾಗಿದ್ದ ಚಿದ್ವಿಲಾಸ್ ಮತ್ತು ಅನಿಲ್ ಹೆಚ್.ಟಿ. ಕಾರಣವೆಂದರೆ ಅತಿಶಯೋಕ್ತಿ ಆಗದು. 7 ದಿನ ಕಾರ್ಯಕ್ರಮ ಯಶಸ್ಸು ಪಡೆಯಲು ಇವರ ಪರಿಶ್ರಮ ಕಾರಣ. ನಿಜವಾಗಲೂ ಕಾರ್ಯಕ್ರಮ ನಿರೂಪಣೆ ಮಾಡುವುದು ಸುಲಭವಲ್ಲ. ಏಕೆಂದರೆ ದಸರಾದ ಪೂರ್ವಭಾವಿ ಕೆಲಸ ಆರಂಭವಾಗುವುದೇ ಕೊನೆ ಗಳಿಗೆಯಲ್ಲಿ ಗೊಂದಲದೊಂದಿಗೆ. ಅದಕ್ಕೆ ಮುಖ್ಯ ಕಾರಣ ಅನುದಾನದ ಅನಿಶ್ಚಿತತೆ.
ಅದೇ ರೀತಿ ಮಡಿಕೇರಿ ದಸರಾ ಕರಗ ಹಿನ್ನಲೆ ಇರುವುದು ಮೊದಲ ದಿನ. ಅಂದರೆ ಕರಗ ಹೊರಡುವ ದಿನ ಎಷ್ಟು ಜನ ಪಂಚೆ ಉಟ್ಟು ರಾಜಕಾರಣಿಗಳಿಗೆ ಜೈಕಾರ ಹಾಕುವಂತೆ ದೇವರಿಗೇ ಜೈಕಾರ ಹಾಕುವವರು ನಂತರದ ದಿನಗಳಲ್ಲಿ ಇರಲಿ ಕೊನೆ ದಿನವಾದರೂ ಇರಬೇಕು. ಏಕೆಂದರೆ ಕೊನೆ ದಿನ ಜನರ ಮದ್ಯೆ ಕರಗ ಹರ ಸಾಹಸ ಮಾಡಿಕೊಂಡು ಸಾಗಬೇಕು. ಎಲ್ಲರೂ ವಿವಿಧ ರೀತಿಯ ಸಿನಿಮಾ ಹಾಡು (ಡಿಜೆ) ಹಾಕಿ ಕೊಂಡು ಸಮಾರಂಭವನ್ನು ರಂಗೇರಿಸುವತ್ತ ಗಮನ ಹರಿಸುತ್ತಾರೆ. ಈ ವರ್ಷದ ದಸರಾ ಮುಗಿತು. ತುಂಬಾ ಅದ್ದೂರಿಯ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಿತು. ಅದಕ್ಕಾಗಿ ಶಾಸಕರು ಸೇರಿ ಸಾಂಸ್ಕೃತಿಕ ತಂಡದ ಬಹಳಷ್ಟು ಜನರ ತ್ಯಾಗವಿದೆ. ಈ ಕಡಿಮೆ ಅಂದರೆ ಒಂದು ತಿಂಗಳು ತಮ್ಮ ಮನೆ, ಸಮಯವನ್ನು ತ್ಯಾಗ ಮಾಡಿದ್ದಿರಿ. ಆದರೆ ಮುಂದಿನ ದಿನಗಳಲ್ಲಿ ದಸರಾ ನಮ್ಮೂರ ಜನರ ದಸರಾ ಆಗಲಿ ಎಂಬುದು ಈ ಬರವಣಿಗೆ ಉದ್ದೇಶ. ಆದ್ದರಿಂದ ಈ ವರ್ಷ ಹಬ್ಬ ಮುಗಿತು ಅಂತ ಸುಮ್ಮನೆ ಇರಬೇಡಿ. ದಸರಾ ಸಮಿತಿಯ ಸಭೆ ಕರೆದು ಮುಂದಿನ ದಿನಗಳಲ್ಲಿ ದಸರಾವನ್ನು ಮಡಿಕೇರಿ ಭೌಗೋಳಿಕ, ಅಂದರೆ ರಸ್ತೆ ಅಗಲ ಏರುತಗ್ಗು ರಸ್ತೆ, ಮಳೆ, ಜನರ ಸಂಖ್ಯೆ, ಪಾಕಿರ್ಂಗ್, ರಕ್ಷಣೆ, ಕಾನೂನು ಸುವ್ಯವಸ್ಥೆ ಈ ಸಾರಿ ವಿದ್ಯುತ್ ಇಲಾಖೆಗೂ ಮಂಟಪ ನಿರ್ಮಾಣದಿಂದ ಅನುಕೂಲತೆ ಉಂಟಾಗಿದೆ. ಅದರೊಡನೆ ಕಸ ಸಮಸ್ಯೆ ತೀವ್ರವಾಗುತ್ತಿರುವುದನ್ನು ನಾವು ಗಮನಿಸಬೇಕು. ಈ ಸಾರಿ 19 ಟನ್ ಕಸ ಸಂಗ್ರಹವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಕೊಡಗು ಸುಂದರ ನಾಡಲ್ಲ, ಕಸದ ಬೀಡು ಆಗುತ್ತೆ. ಅದೇ ರೀತಿ ಪಾರ್ಕಿಂಗ್ ನೆಪದಲ್ಲಿ ಜಿಲ್ಲಾ ಕ್ರೀಡಾಂಗಣ ಮೇಲೆ ಆಗುವ ದೌರ್ಜನ್ಯ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿ ದಸರಾ ಮುಗಿದಿದೆ. ಮುಂದಿನ ದಿನಗಳು ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಬೈಲಾ ರೂಪಿಸಿ ಅದರ ಪ್ರಕಾರ ಕಾರ್ಯಕ್ರಮ ಸಂಪ್ರದಾಯ ಪ್ರಕಾರ ದಸರಾ ಆಚರಣೆಗೆ ಒತ್ತು ನೀಡಿ ಎಂದು ಕೊಡಗಿನ ಜನರ ಪರವಾಗಿ ನನ್ನ ಕೋರಿಕೆ. ದಸರಾ ಸಮಿತಿಯಲ್ಲಿ ಇಷ್ಟು ವರ್ಷ ದುಡಿದ ಎಲ್ಲಾ ಸದಸ್ಯರಲ್ಲಿ ಎಲ್ಲರು ಒಂದು ವೇದಿಕೆಗೆ ಬಂದು ಮಡಿಕೇರಿ ದಸರಾವನ್ನು ಮಡಿಕೇರಿ ದಸರಾವನ್ನಾಗಿ ಉಳಿಸಿ ಎಂದು ನನ್ನ ಕಳಕಳಿಯ ಮನವಿ.ಕೊನೆಯ ಮಾತು ದಸರಾದ ಕುರಿತು ನನ್ನ ಈ ಹಿಂದಿನ ಲೇಖನಕ್ಕೆ ಓದುಗರೊಬ್ಬರ ಪ್ರತಿಕ್ರಿಯೆ ಹೀಗಿತು “ಉತ್ತಮ ಬರಹ, ಇಲ್ಲಿ ಸಂಪ್ರದಾಯವು ಇಲ್ಲ, ಪವಿತ್ರತೆಯು ಇಲ್ಲ, ಸ್ವಚತೆಯು ಇಲ್ಲ, ಎಲ್ಲಾ ಅಯೋಮಯ”
ಲೇಖನ : ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು
ಮಡಿಕೇರಿ. ಮೋ:- 9448899554