ಮಡಿಕೇರಿ ಏ.24 NEWS DESK : ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ವತಿಯಿಂದ ಇದೇ ಪ್ರಥಮ ಬಾರಿಗೆ ಜಿಲ್ಲಾ ಕುಲಾಲ ಕುಂಬಾರ ಬಾಂಧವರಿಗಾಗಿ ಆಯೋಜಿಸಲಾಗಿರುವ ಕ್ರೀಡೋತ್ಸವ ಹಾಗೂ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಮಡಿಕೆ ತಯಾರಕರ ಸಹಕಾರ ಸಂಘದ ಅಧ್ಯಕ್ಷ ಎಂ.ಡಿ.ನಾಣಯ್ಯ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕುಲಾಲ ಕುಂಬಾರ ಬಾಂಧವರ ಸಂಘಟನೆಗಾಗಿ ಏ.26 ಮತ್ತು 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಮಾಜ ಬಾಂಧವರು ಮಕ್ಕಳಾದಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ. ಈಗಾಗಲೇ ಸಂಘಟನೆ ವತಿಯಿಂದ ಪ್ರತಿ ಮನೆಮನೆಗಳಿಗೆ ತೆರಳಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ಸಮಾಜ ಬಾಂಧವರು ಈ ವಿನೂತನ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು, ಕ್ರೀಡಾಕೂಟ ಮತ್ತು ಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದೆ. ಕುಲಾಲ ಕುಂಬಾರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಂ.ಡಿ.ನಾಣಯ್ಯ ಮನವಿ ಮಾಡಿದ್ದಾರೆ.











