ಮಡಿಕೇರಿ ಅ.22 NEWS DESK : 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಮೂರ್ನಾಡು ಸಮುದಾಯ ಭವನದಲ್ಲಿ 22 ರಿಂದ 45 ವಯಸ್ಸಿನ ಮಹಿಳೆಯರ ಯೋಗ ಕ್ಷೇಮದಲ್ಲಿ ಆಯುರ್ವೇದ ಪಾತ್ರ ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಲಿತು. ವೈದ್ಯರಾದ ಹೆಚ್.ಆರ್.ಸರಸ್ವತಿ, ಎಸ್.ಎನ್.ಬೃಂದಾ ಗರ್ಭಿಣಿಯರಲ್ಲಿನ ಸಮಸ್ಯೆಗಳು, ರಕ್ತಹೀನತೆ, ರಕ್ತದೊತ್ತಡ, ಮಧುಮೇಹ, ಗ್ಯಾಸ್ಟ್ರಿಕ್, ಸಂತಾನೋತ್ಪತ್ತಿ ಸಮಸ್ಯೆಗಳು, ಥೈರಾಯ್ಡ್, ಆಯುರ್ವೇದ ಪಂಚಕರ್ಮ ಚಿಕಿತ್ಸೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಮನೆ ಮದ್ದಿನ ಬಗ್ಗೆ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತಾ ಕೀರ್ತನ್ ಮಾತನಾಡಿ, ಆಯುರ್ವೇದದ ಸದುಪಯೋಗವನ್ನು ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ಆಯುಷ್ ಆರೋಗ್ಯ ಕೈಪಿಡಿ ಬಿಡುಗಡೆ ಮಾಡಲಾಯಿತು.