ಚೆಟ್ಟಳ್ಳಿ ಅ.22 NEWS DESK : ಚೆಟ್ಟಳ್ಳಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ 16ನೇ ವರ್ಷದ ಓಣಂ ಅನ್ನು ಮಲಯಾಳಿ ಸಮುದಾಯದವರು ಸಂಭ್ರಮದಿಂದ ಆಚರಿಸಿದರು. ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಶೋಭಾಯಾತ್ರೆಯನ್ನು ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷರಾದ ಸಿಂಧೂರಾಜನ್, ಗೌರವ ಅಧ್ಯಕ್ಷರಾದ ಸಿ.ಎಸ್.ಕುಟ್ಟನ್, ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಉದ್ಘಾಟಿಸಿದರು. ನಂತರ ಚಂಡೆವಾದ್ಯ ಮಾವೇಲಿ ಯೊಂದಿಗೆ ಮಲೆಯಾಳಿ ಜನಾಂಗದ ಸಾಂಪ್ರದಾಯಿಕ ಶೋಭಾಯಾತ್ರೆ ಮಂಗಳ ಸಭಾಂಗಣದಿಂದ ಹೊರಟು ಚೆಟ್ಟಳ್ಳಿ ಪಟ್ಟಣಕ್ಕೆ ತೆರಳಿ ಪ್ರೌಢಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು. ಸಮಾಜ ಭಾಂದವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನೆರವೇರಿತು. ನಂತರ ಓಣಂ ಸದ್ಯ( ವಿಶೇಷ ಭೋಜನ) ಸವಿದರು. ಕಾರ್ಯದ ಅಂಗವಾಗಿ ಸಮಾಜದ ಸದಸ್ಯರಾದ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ವಿವಿಧ ಪ್ರಶಸ್ತಿಗೆ ಭಾಜನರಾದ ಸುನಿಲ್ ಕುಮಾರ್, 25 ವರ್ಷಗಳ ನಂತರ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಬೇಬಿರಾಣಿ, ಆದಿಲ್ ಪ್ರದೀಪ್, ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ಸಾನಿಧ್ಯ ಉಮೇಶ್, ರಿನಿಶಾ ಸುರೇಂದ್ರನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಮಹಿಳಾ ತಂಡದಿಂದ ಕೇರಳದ ತಿರುವಾದಿರ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು.