ಮಡಿಕೇರಿ ಅ.22 NEWS DESK : ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಹಿಂದೂಗಳಿಗೆ ಸುಸಜ್ಜಿತವಾದ ಸ್ಮಶಾನದ ಜಾಗವನ್ನು ಗುರುತಿಸಿ ಮಂಜೂರು ಮಾಡಬೇಕೆಂದು ನೆಲ್ಲಿಹುದಿಕೇರಿ ಸ್ಮಶಾನ ಹೋರಾಟ ಸಮಿತಿ ಒತ್ತಾಯಿಸಿದೆ. ನೆಲ್ಲಿಹುದಿಕೇರಿಯ ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಪಿ.ಆರ್.ಭರತ್, ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಆದಿವಾಸಿಗಳು, ದಲಿತರು, ಬಿಲ್ಲವರು, ಮೊಗೇರರು ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ 5 ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂ ಜನಾಂಗದವರಿದ್ದಾರೆ. ಸ್ಮಶಾನದ ಕೊರತೆಯಿಂದಾಗಿ ಶವಗಳನ್ನು ಕಾವೇರಿ ನದಿಯ ದಡದಲ್ಲಿ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆರೋಪಿಸಿದರು. ಸುಮಾರು 16 ವರ್ಷಗಳ ಹಿಂದೆ ಸ್ಥಳೀಯ ನಾಗರೀಕರೆ ಬೆಟ್ಟದಕಾಡು ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಅರ್ಧ ಏಕರೆ ಜಾಗವನ್ನು ಗುರುತಿಸಿದ್ದರು. ಆದರೆ 2018-19 ಸೇರಿದಂತೆ ನಂತರದಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಸ್ಮಶಾನದ ಜಾಗ ಕಾವೇರಿ ನದಿ ಪಾಲಾಗಿದ್ದು, ಪ್ರಸ್ತುತ ಸಂಸ್ಕಾರ ಮಾಡಲಾದ ಶವದ ಅಸ್ಥಿ ನದಿ ಪಾಲಾಗುತ್ತಿದೆ. ಅಲ್ಲದೆ ಸೂಕ್ತ ಜಾಗವಿಲ್ಲದೆ ಇಕಟ್ಟಿನ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಗುರುತಿಸಿರುವ ಸ್ಮಶಾನಕ್ಕೆ ಯೋಗ್ಯವಾಗಿರುವ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ಜಾಗವನ್ನು ತಕ್ಷಣ ತೆರವುಗೊಳಿಸಬೇಕು ಅಥವಾ ಪರ್ಯಾಯ ಜಾಗವನ್ನು ಕಲ್ಪಿಸಬೇಕೆಂದು ಪಿ.ಆರ್.ಭರತ್ ಆಗ್ರಹಿಸಿದರು. ಹೋರಾಟ ಸಮಿತಿಯ ಮುಖಂಡರಾದ ಪಿ.ಜಿ.ಸುರೇಶ್, ಸಂದೀಪ್ ಕುಮಾರ್, ಕೆ.ಕೆ.ಚಂದ್ರನ್, ಶಿವರಾಮನ್, ಟಿ.ಟಿ.ಉದಯನ್, ಹಬಿಬ್ ಮತ್ತಿತರರು ಉಪಸ್ಥಿತರಿದ್ದರು.